ಕೊಪ್ಪಳ : ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ಮತ್ತು ಸ್ಥಳಿಯ ಸಮಸ್ಯೆಗಳಿಗೆ ಸ್ಥಳಿಯ ಮಟ್ಟದಲ್ಲೇ ಪರಿಹಾರ ಒದಗಿಸಿ ಗ್ರಾಮಾಭಿವೃದ್ಧಿ ಮತ್ತು ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ವರ್ಣಿತ್ ನೇಗಿ ಹೇಳಿದರು.
ನಗರದ ಜಿಪಂ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಸ್ಥಳಿಯ ಆಡಳಿತವನ್ನು ಬಲಗೊಳಿಸುವ ನಮ್ಮ ಬದ್ದತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಸಾಮರ್ಥ್ಯವನ್ನು ಸಂಭ್ರಮಿಸುವ ದಿನವಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಗ್ರಾಮೀಣ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜಿ.ಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಾತನಾಡಿ, 73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನವನ್ನು ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ಏ. 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗಿತ್ತದೆ. ಈ ತಿದ್ದುಪಡಿಯು ಪಂಚಾಯತಿಗಳಿಗೆ ಸಂವಿಧಾನಾತ್ಮಕ ಸ್ಥಾನಮಾನವನ್ನು ನೀಡಿದ್ದು, ಭಾರತದಲ್ಲಿ ವಿಕೇಂದ್ರೀಕೃತ ಆಡಳಿತ ಪಯಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದರು.
ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ, ಎಫ್.ಇ.ಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ, ಜಿಪಂ ಅಧಿಕಾರಿಗಳು ಸಿಬ್ಬಂದಿಗಳು ಎಲ್ಲಾ ಯೋಜನೆಗಳ ಸಂಯೋಜಕರು, ಪಿಡಿಓಗಳು, ಗ್ರಂಥಪಾಲಕರು, ಕರವಸೂಲಿಗಾರರು, ವಾಹನ ಚಾಲಕಿಯರು ಇದ್ದರು.
ಸಾಧಕರಿಗೆ ಸನ್ಮಾನ
ಕರವಸೂಲಿಯಲ್ಲಿ ಜಿಲ್ಲೆಯಲ್ಲಿ ಶೇ.100% ಸಾಧನೆ ಮಾಡಿದ ಪಿಡಿಓಗಳು ಹಾಗೂ ಕರವಸೂಲಿಗಾರರಿಗೆ, ಅತ್ಯುತ್ತಮ ಅರಿವು ಕೇಂದ್ರವನ್ನು ನಿರ್ವಹಿಸಿದ ಪಿಡಿಓಗಳು ಮತ್ತು ಗ್ರಂಥಪಾಲಕರಿಗೆ, ಅತ್ಯುತ್ತಮ ವಾಹನ ಚಾಲಕರು ಹಾಗೂ ಕಸ ವಿಂಗಡಣೆಗಾರರಿಗೆ, ವಿಭಾಗ ಹಾಗೂ ಜಿಲ್ಲಾ ಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಿಡಿಓಗಳಿಗೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಪಿಡಿಓಗಳಿಗೆ ಹಾಗೂ ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.