ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ಭೂಮಿ ಪೂಜೆ ಸಲ್ಲಿಸಿದರು. ವಕ್ತಾರ ಶರಣಪ್ಪ ಭತ್ತದ್, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ನಾಗಪ್ಪ ಚಿಂಚಲಿ, ಪಪಂ. ಆಶ್ರಯ ಸಮಿತಿ ಸದಸ್ಯ ಕನಕಪ್ಪ ಮ್ಯಾಗಡೆ ಇತರರಿದ್ದರು.
ಕನಕಗಿರಿ: ಈ ಹಿಂದಿನ ಶಾಸಕ ಒಂದು ರಸ್ತೆಯನ್ನೂ ನಿರ್ಮಿಸದಿರುವುದರಿಂದ ಈಗ ನನಗೆ ರಸ್ತೆ ನಿರ್ಮಾಣವೇ ಹೆಚ್ಚಿನ ಹೊರೆಯಾಗಿದೆ ಎಂದು ಮಾಜಿ ಶಾಸಕ ಬಸವರಾಜ ದಢೇಸುಗೂರು ವಿರುದ್ಧ ಸಚಿವ ಶಿವರಾಜ ತಂಗಡಗಿ ಹರಿಹಾಯ್ದರು.
ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಾಗಲಾಪುರ-ಬಸರಿಹಾಳ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಕ್ಷೇತ್ರದ ಎಲ್ಲೆಯೇ ಹೋಗಲಿ ಜನತೆ ರಸ್ತೆ ರಸ್ತೆ ಎಂದು ಕೇಳುತ್ತಿದ್ದಾರೆ. ಈ ಹಿಂದಿನ ಶಾಸಕ ರಸ್ತೆಮಾಡದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ. ರಸ್ತೆ ನಿರ್ಮಾಣಕ್ಕೆ ಅತೀ ಹೆಚ್ಚಿನ ಅನುದಾನ ತರಲಾಗುತ್ತಿದೆ. ಕನಕಗಿರಿಯಿಂದ ಯತ್ನಟ್ಟಿ ರಸ್ತೆ ನಿರ್ಮಾಣಕ್ಕೆ 38 ಕೋಟಿ ರೂ. ವ್ಯಯ ಮಾಡಿ ರಸ್ತೆ ನಿರ್ಮಿಸಲಾಗುತ್ತಿದೆ. ಇದೀಗ 6.5 ಕೋಟಿ ವೆಚ್ಚದಲ್ಲಿ 6.3 ಕಿ.ಮೀ ಬಸರಿಹಾಳ ನಾಗಲಾಪುರ ರಸ್ತೆ ಸುಧಾರಣೆ ಮಾಡಲಾಗುತ್ತಿದ್ದು, 7.5 ಕೋಟಿ ರೂ. ವೆಚ್ಚದಲ್ಲಿ ಕನಕಗಿರಿಯಿಂದ ಚಿಕ್ಕತಾಂಡಾ 5.8 ಕಿ.ಮೀ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 35 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗುವುದು, ಕನಕಗಿರಿಯಿಂದ ದೇವಲಾಪುರ ರಸ್ತೆಗೆ 20 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಬಸರಿಹಾಳ ಗ್ರಾಮದಲ್ಲಿ ವಸತಿ ಶಾಲೆ ಆರಂಭಿಸಬೇಕು ಹಾಗೂ ಪ್ರೌಢ ಶಾಲೆಯಾಗಿ ಮೇಲ್ದರ್ಜೆಗೇರಿಸಬೇಕು. ಶಾಲೆಗೆ ಶಿಕ್ಷಕರ ಕೊರತೆಯಿದ್ದು, ಶಿಕ್ಷಕರನ್ನು ಒದಗಿಸಬೇಕು. 2 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.
ಕನಕಗಿರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಸಮುದಾಯ ಭವನಕ್ಕೆ 25ಲಕ್ಷ ರೂ.ದೊರೆಯಲಿದೆ. ಪಂಚಾಯಿತಿಯಿಂದ 9/11 ದೊರೆತ ಬಳಿಕ ಸಮುದಾಯ ಭವನ ಆರಂಭಕ್ಕೆ ಕ್ರಮವಹಿಸಲಾಗುವುದು. ವಸತಿ ಶಾಲೆ ಆರಂಭಕ್ಕೆ ಕೆಲ ಷರತ್ತುಗಳಿವೆ ಎಂದ ಅವರು, ಪ್ರೌಢ ಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಸಿಸಿ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪ.ಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ್, ಶರಣೇಗೌಡ, ಅನಿಲ್‌ಕುಮಾರ ಬಿಜ್ಜಳ, ರಾಜಾಸಾಬ್ ನಂದಾಪುರ, ಪ್ರಮುಖರಾದ ನಾಗಪ್ಪ ಹುಗ್ಗಿ ಇತರರಿದ್ದರು.