ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

ತಾಲೂಕಿನ ಭಾಗ್ಯನಗರದ ಸಾಯಿಬಾಬ ದೇವಸ್ಥಾನದ ಮುಂದಿನ ಭಾಗ್ಯನಗರ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾಗಿಗೆ ಶಾಕಸ ರಾವೇಂದ್ರ ಹಿಟ್ನಾಳ ಭೂಮಿ ಪೂಜೆ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಪ್ರಮುಖರಾದ ಶ್ರೀನಿವಾಸ ಗುಪ್ತಾ, ಗೂಳಪ್ಪ ಹಲಗೇರಿ, ಗವಿಸಿದ್ದಪ್ಪ ಕರಡಿ, ವಿರುಪಣ್ಣ ನವೋದಯ, ಯಮನಪ್ಪ ಕಬ್ಬೇರ ಇದ್ದರು.
ತಾಲೂಕಿನ ಭಾಗ್ಯನಗರದ ಸಾಯಿಬಾಬ ದೇವಸ್ಥಾನದ ಮುಂದಿನ ಭಾಗ್ಯನಗರ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾಗಿಗೆ ಶಾಕಸ ರಾವೇಂದ್ರ ಹಿಟ್ನಾಳ ಭೂಮಿ ಪೂಜೆ ಮಾಡಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಪ್ರಮುಖರಾದ ಶ್ರೀನಿವಾಸ ಗುಪ್ತಾ, ಗೂಳಪ್ಪ ಹಲಗೇರಿ, ಗವಿಸಿದ್ದಪ್ಪ ಕರಡಿ, ವಿರುಪಣ್ಣ ನವೋದಯ, ಯಮನಪ್ಪ ಕಬ್ಬೇರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಘವೇಂದ್ರ ಹಿಟ್ನಾಳ ಭರವಸೆ
  • ಸಚಿವ ಸ್ಥಾನದ ಬಗ್ಗೆ ಪಕ್ಷದ ತೀಮಾರ್ನಕ್ಕೆ ಬದ್ಧ

ಕೊಪ್ಪಳ : ನಗರ ಹಾಗೂ ಭಾಗ್ಯನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಸೋಮವಾರ ತಾಲೂಕಿನ ಭಾಗ್ಯನಗರದ ಸಾಯಿಬಾಬಾ ದೇವಸ್ಥಾನದ ಮುಂದಿನ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ಉದ್ಯಾನವನಗಳು, ಮಿನಿಮಾಸ್ಟ್​ ದೀಪಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಉದ್ಯಾನವನ ಹಾಗೂ ಕಂಪೌಂಡ್​ ಗೋಡೆ ನಿಮಾರ್ಣಕ್ಕೆ 15 ಲಕ್ಷ ರೂ., ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉದ್ಯಾನವನಕ್ಕೆ 14.80 ಲಕ್ಷ ರೂ., ರೆಡ್​ಕ್ರಾಸ್​ ಸಂಸ್ಥೆ ಸಮೀಪದ ಉದ್ಯಾನವನಕ್ಕೆ 12 ಲಕ್ಷ ರೂ., ನಗರದ ಪರಿಶಿಷ್ಟ ಪಂಗಡದ ವಸತಿ ನಿಲಯದ ಬಳಿ ಉದ್ಯಾನವನಕ್ಕೆ 24.75 ಲಕ್ಷ ರೂ., ಮಿನಿಮಾಸ್ಟ್​ ದೀಪಗಳ ಅಳವಡಿಕೆಗೆ 24 ಲಕ್ಷ ರೂ., ಕೆಆರ್​ಐಡಿಎಲ್​ ಕಚೇರಿ ಬಳಿ ಉದ್ಯಾನವನಕ್ಕೆ 22.10 ಲಕ್ಷ ರೂ., ಭಾಗ್ಯನಗರ ಸಾಯಿಬಾಬಾ ದೇವಸ್ಥಾನದ ಬಳಿ ಉದ್ಯಾನವನಕ್ಕೆ 3.65 ಲಕ್ಷ ರೂ. ಹಾಗೂ ಕಿನ್ನಾಳ ರಸ್ತೆಯ ವೀರಭದ್ರಪ್ಪ ಅಗಡಿ ಲೇಔಟ್​ನಲ್ಲಿ ಉದ್ಯಾನವನಕ್ಕೆ 24.60 ಲಕ್ಷ ಸೇರಿದಂತೆ ವಿವಿಧ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಭಾಗ್ಯನಗರದ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಫೋರ್​ವೇ, ಡಿವೈಡರ್​, ಲೈಟಿಂಗ್​ ಮತ್ತು ಡ್ರೈನೇಜ್​ ವ್ಯವಸ್ಥೆ ಕಲ್ಪಿಸಲಾಗುವುದು. ಅಶೋಕ ವೃತ್ತದಿಂದ ಕಿನ್ನಾಳವರೆಗೆ ರಸ್ತೆ ಅಭಿವೃದ್ಧಿಗೂ 5 ಕೋಟಿ ರೂ. ಮೀಸಲಿಡಲಾಗಿದೆ. ಭಾಗ್ಯನಗರ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಉಂಟಾಗುವ ಸಮಸ್ಯೆ ನಿವಾರಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಸಂಸದರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಉತ್ತಮ ಪ್ರಮಾಣದ ನೀರು ಸಂಗ್ರಹವಾಗಿದ್ದು, ಈಗಾಗಲೇ ಸುಮಾರು 80 ಟಿಎಂಸಿ ನೀರು ತುಂಬಿದೆ. ಇದರಿಂದ ರೈತರಿಗೆ ಒಂದು ಬೆಳೆಗೆ ನೀರಿನ ಕೊರತೆಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಇನ್ನಷ್ಟು ನೀರು ಸಂಗ್ರಹವಾಗುವ ವಿಶ್ವಾಸವಿದೆ. ಐಸಿಸಿ ಸಭೆಯಲ್ಲಿ ಚರ್ಚಿಸಿ ಕುಡಿವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಪ್ರಮುಖರಾದ ಶ್ರೀನಿವಾಸ ಗುಪ್ತಾ, ಗೂಳಪ್ಪ ಹಲಗೇರಿ, ಗವಿಸಿದ್ದಪ್ಪ ಕರಡಿ, ವಿರುಪಣ್ಣ ನವೋದಯ, ಯಮನಪ್ಪ ಕಬ್ಬೇರ, ಎಂ.ಕಾಟನ್​ ಪಾಷಾ ಇತರರಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ

ಸಚಿವ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ರಾಘವೇಂದ್ರ ಹಿಟ್ನಾಳ, ನಾನು ರಾಜೀನಾಮೆ ನೀಡುವುದಿಲ್ಲ. ಕೊಪ್ಪಳ ಕ್ಷೇತ್ರದ ಜನರು ಐದು ವರ್ಷ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಸೇರಿ ಪಕ್ಷದ ಯಾವುದೇ ನಾಯಕರ ಬಗ್ಗೆ ಅಸಮಾಧಾನವಿಲ್ಲ. ಹೈಕಮಾಂಡ್​ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ತೀಮಾರ್ನಕ್ಕೆ ಬದ್ಧನಾಗಿದ್ದು, ಉಳಿದ 18 ತಿಂಗಳಲ್ಲಿ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದರು.
ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ದೊರೆತಿದ್ದು, ಒಳ್ಳೆಯದು. ಹೆಚ್ಚಿನ ಅನುದಾನದಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ನಾಯಕರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸಚಿವ ಸ್ಥಾನ ಪಡೆಯುವ ಆಸೆ ಇದ್ದ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಯತ್ನ ಮಾಡಿದ್ದೇನೆ. ಪಕ್ಷದ ನಿರ್ಧಾರಕ್ಕೆ ಗೌರವವಿದೆ. ಸಿದ್ದರಾಮಯ್ಯನವರು ನನ್ನ ರಾಜಕೀಯ ಗುರುಗಳು ಹಾಗೂ ದೇವರು ಇದ್ದಂತೆ. ಅವರ ಬಗ್ಗೆ ಯಾವುದೇ ಮುನಿಸಿಲ್ಲ. ಯಾವುದೇ ಬೇಡಿಕೆಯನ್ನು ಪಕ್ಷದ ಮುಂದೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net