ಭಾನಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ಲಾಸ್ಟಿಕ್‌ಮುಕ್ತ ಗ್ರಾಮ ಜಾಗೃತಿ ಕಾರ್ಯಕ್ರಮಕ್ಕೆ ಪಿಡಿಒ ರಮೇಶ ತಿಮ್ಮಾರೆಡ್ಡಿ ಚಾಲನೆ ನೀಡಿದರು. ಮುಖ್ಯಶಿಕ್ಷಕ ನಾಗಪ್ಪ ಅಗಸಿಮುಂದಿನ್, ಮಾನಸ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಅಂಗಡಿ, ಶಿಕ್ಷಕರಾದ ವೀಣಾ ಕುಲಕರ್ಣಿ, ಆನಂದಕುಮಾರ್ ಕನ್ನಾರಿ, ಉದಯಕುಮಾರ, ಶಿವಕುಮಾರ, ಲಕ್ಷ್ಮೀ ತಮ್ಮನಗೌಡರ ಇದ್ದರು.
ಕುಕನೂರು: ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಷೇಧ ನಿಯಮ ಪಾಲಿಸುವ ಜತೆಗೆ ಮರುಬಳಕೆಯ ವಸ್ತುಗಳನ್ನು ಉಪಯೋಗಿಸಬೇಕು ಎಂದು ಪಿಡಿಒ ರಮೇಶ ತಿಮ್ಮಾರೆಡ್ಡಿ ಹೇಳಿದರು.
ಭಾನಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಪಂ, ತಾಪಂ, ಗ್ರಾಪಂ ಹಾಗೂ ಮಾನಸ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ಮುಕ್ತ ಗ್ರಾಮ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಪ್ರತಿಯೊಬ್ಬರೂ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ಬಳಸಬೇಕು. ಮರ, ಬಿದಿರು ಅಥವಾ ಮಣ್ಣಿನಿಂದ ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದರು.
ಶಿಕ್ಷಕಿ ಲಕ್ಷ್ಮೀ ತಮ್ಮನಗೌಡರ ಮಾತನಾಡಿ, ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದ ಪರಿಸರ ಮತ್ತು ಜೀವಿಗಳಿಗೆ ಉಂಟಾಗುತ್ತಿರುವ ಹಾನಿ ತಡೆಗಟ್ಟಲು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಅಗತ್ಯವಾಗಿದೆ. ನಿಯಮಗಳು ಕೇವಲ ಕಾಗದದ ಮೇಲೆ ಉಳಿಯದೆ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಹಾನಿ ಬಗ್ಗೆ ಅರಿತು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಭವಿಷ್ಯದ ಪೀಳಿಗೆಗೆ ಸ್ವಚ್ಛ ಮತ್ತು ಸುರಕ್ಷಿತ ಭೂಮಿಯನ್ನು ಬಿಟ್ಟುಕೊಡುವುದು ಎಲ್ಲರ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣವೇ ದೇಶದ ಪ್ರಗತಿ ಮತ್ತು ಆರೋಗ್ಯಕ್ಕೆ ದಾರಿಯಾಗಿದೆ. ಎಲ್ಲರೂ ಕೈಜೋಡಿಸಿ ಪ್ಲಾಸ್ಟಿಕ್‌ಗೆ ’ನೋ’ ಎಂದು ಪರಿಸರ ರಕ್ಷಿಸೋಣ ಎಂದು ತಿಳಿಸಿದರು.
ಮುಖ್ಯಶಿಕ್ಷಕ ನಾಗಪ್ಪ ಅಗಸಿಮುಂದಿನ್, ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಅಂಗಡಿ, ಶಿಕ್ಷಕರಾದ ವೀಣಾ ಕುಲಕರ್ಣಿ, ಆನಂದಕುಮಾರ್ ಕನ್ನಾರಿ, ಉದಯಕುಮಾರ ತಳವಾರ, ಶಿವಕುಮಾರ ಹೊಸಮನಿ, ಸತೀಶ್ ಕಟ್ಟಿಮನಿ ಇತರರಿದ್ದರು.