ವೆಂಕಟಗಿರಿಯಲ್ಲಿ ಇತ್ತಿಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ಕುಮಾರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೇವಮ್ಮ ಸಲಹೆ
ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ
ಕೊಪ್ಪಳ : ಹಾವು ಕಡಿತದಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ ಹೇಳಿದರು.
ಜಿಲ್ಲೆಯ ವೆಂಕಟಗಿರಿಯಲ್ಲಿ ಇತ್ತಿಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಶೇ.70ಕ್ಕೂ ಹೆಚ್ಚು ಜನರು ಕೃಷಿ ಅವಲಂಬಿಸಿದ್ದಾರೆ. ದೇಶದಲ್ಲಿ ಕಂಡುಬರುವ ಪ್ರಮುಖ ನಾಲ್ಕು ವಿಷಕಾರಿ ಹಾವುಗಳಾದ ನಾಗರಹಾವು, ಕಟ್ಟಾವು, ಕೊಳಕು ಮಂಡಲ ಹಾಗೂ ಗರಗಸ ಮಂಡಲ ಹಾವುಗಳ ಕಡಿತದಿಂದಲೇ ಹೆಚ್ಚಿನ ಸಾವುಗಳು ಸಂಭವಿಸುತ್ತವೆ. ವಿಶೇಷವಾಗಿ ನಾಗರಹಾವನ್ನು ಹೊರತುಪಡಿಸಿ ಉಳಿದ ಮೂರು ಹಾವುಗಳು ರಾತ್ರಿವೇಳೆಯಲ್ಲಿ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಆದ್ದರಿಂದ ರಾತ್ರಿ ವೇಳೆ ಹೊರಗೆ ಸಂಚರಿಸುವಾಗ ಟಾರ್ಚ್ ಬಳಸುವುದು ಹಾಗೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದರು.
ಮನೆಯ ಸುತ್ತಮುತ್ತ ಹಾಗೂ ಹೊಲಗದ್ದೆಗಳಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಹಾವುಗಳು ಬರುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಶೂ ಧರಿಸಬೇಕು. ಹೊಲಗಳಲ್ಲಿ ಅಥವಾ ಮನೆಯ ಹೊರಭಾಗದಲ್ಲಿ ಮಲಗುವ ಸಂದರ್ಭಗಳಲ್ಲಿ ನೆಲದ ಬದಲು ಮಂಚ ಬಳಸುವುದು, ನೆಲದಲ್ಲಿ ಮಲಗಬೇಕಾದರೆ ಸೊಳ್ಳೆ ಪರದೆ ಬಳಸುವುದು ಸುರಕ್ಷಿತ ಕ್ರಮಗಳಾಗಿವೆ. ಹಾವು ಕಚ್ಚಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ರಕ್ತಬಂಧಕ ಪಟ್ಟಿ ಕಟ್ಟುವುದು, ಗಾಯವನ್ನು ಕತ್ತರಿಸುವುದು ಅಥವಾ ನಾಟಿ ಔಷಧಗಳನ್ನು ಬಳಸುವುದು ಅಪಾಯಕಾರಿಯಾಗಿದೆ. ಹಾವು ಕಚ್ಚಿದ ವ್ಯಕ್ತಿಯನ್ನು ಸಮಾಧಾನಪಡಿಸಿ, ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ಕುಮಾರ, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಗೂ ಗರ್ಭಿಣಿಯರಿದ್ದರು.