ಹಸಿರೀಕರಣಕ್ಕೆ ಒತ್ತು ನೀಡಲಿ

ಕಾರಟಗಿಯ ಪುರಸಭೆ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಅಧ್ಯಕ್ಷ ಮಂಜುನಾಥ ಮೇಗೂರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಇದ್ದರು.
ಕಾರಟಗಿಯ ಪುರಸಭೆ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಅಧ್ಯಕ್ಷ ಮಂಜುನಾಥ ಮೇಗೂರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಧನಂಜಯ ಎಲಿಗಾರ್ ಸಲಹೆ
  • ಪುರಸಭೆ ಬಜೆಟ್ ಪೂರ್ವಭಾವಿ ಸಭೆ
ಕಾರಟಗಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬೆರಳಣಿಕೆ ಸಾರ್ವಜನಿಕರು ಪಾಲ್ಗೊಂಡಿದ್ದು, ನಾನಾ ಸಮಸ್ಯೆಗಳ ಕುರಿತ ಚರ್ಚೆಗೆ ಸಭೆ ಸೀಮಿತವಾಯಿತು.
ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಅಧ್ಯಕ್ಷತೆಯಲ್ಲಿ ನಡೆದ ಸಭೆ ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಕನ್ನಡಿ ಹಿಡಿದಂತಿತ್ತು. ಕಳೆದ ಕೆಲ ದಿನಗಳ ಹಿಂದೆಯೇ ನಿಗದಿಯಾಗಿದ್ದ ಸಭೆಯಲ್ಲಿ ಸಾರ್ವಜನಿಕರಿಗಿಂತ ಪುರಸಭೆ ಸದಸ್ಯರು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮುಖಂಡ ಧನಂಜಯ ಎಲಿಗಾರ್ ಮಾತನಾಡಿ, ಪಟ್ಟಣದಲ್ಲಿ ಅಗತ್ಯ ಇರುವ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು. ಸ್ಥಳೀಯ ನಿವಾಸಿ ವೆಂಕಟೇಶ್ವರರಾವ್ ಮಾತನಾಡಿ, ಪಟ್ಟಣದಲ್ಲಿ ತ್ಯಾಜ್ಯ ನಿರ್ವಹಣೆಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಗೋಡೆ ಬರಹ, ಸಾಮುದಾಯಿಕ ಸಹಭಾಗಿತ್ವ ಸೇರಿ ವಿವಿಧ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು. ಪಟ್ಟಣದಲ್ಲಿ ಹಾದುಹೋಗಿರುವ ಆರ್.ಜಿ.ರಾಜ್ಯ ಹೆದ್ದಾರಿ, ಬೂದಗುಂಪಾ ರಸ್ತೆ ಹಾಗೂ ನವಲಿ ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಮಾತನಾಡಿ, ವಿವಿಧ ವಾರ್ಡ್‌ಗಳಲ್ಲಿ ಜನರಿಗೆ ಮೂಲಸೌಲಭ್ಯ ಕಲ್ಪಿಸುವ ಜತೆಗೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿಡಲು ಮುಂದಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ಮಾತನಾಡಿ, ಜನರು ನೀಡಿರುವ ಸಲಹೆಗಳನ್ನು ಆಯವ್ಯಯ ಮಂಡನೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಪಟ್ಟಣದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹಣೆಗೆ ವಿಶೇಷ ಅಭಿಯಾನ, ಕುಡಿವ ನೀರಿನ ಸಮಸ್ಯೆ, ಕಸ ವಿಲೇವಾರಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಶ್ರೀನಿವಾಸರೆಡ್ಡಿ, ಹಿರೇಬಸಪ್ಪ ಸಜ್ಜನ್, ಪ್ರಮುಖರಾದ ನಾಗರಾಜ ಭಜಂತ್ರಿ, ಪುರಸಭೆ ವ್ಯವಸ್ಥಾಪಕ ಪರಮೇಶ್ವರಪ್ಪ, ಸಿಬ್ಬಂದಿ ಅಕ್ಷತಾ, ನಾಗಪ್ಪ, ರಾಘವೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net