ಕೊಪ್ಪಳ: ಕರ್ನಾಟಕ ಪೊಲೀಸ್ ಶಿಸ್ತು, ಕರ್ತವ್ಯನಿಷ್ಠೆಗೆ ಹೆಸರಾಗಿದೆ. ಸಾರ್ವಜನಿಕ ಸೇವೆಯಲ್ಲಿ ನಮ್ಮ ವೈಯಕ್ತಿಕ ಜೀವನ ಮುಡಿಪಾಗಿಡಬೇಕು ಎಂದು ನಿವೃತ್ತ ಪಿಎಸ್ಐ ಶ್ರೀಶೈಲರಾವ್ ಕುಲಕರ್ಣಿ ಹೇಳಿದರು.
ನಗದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗಿಯಾಗಿ ಮಾತನಾಡಿದರು.
ಪೊಲೀಸರು ನಮ್ಮ ಜೀವ ರಕ್ಷಕರೆಂದು ಜನ ನಂಬಿದ್ದಾರೆ. ಅನ್ಯಾಯವಾದಾಗ ನಮ್ಮ ಬಳಿ ಬರುತ್ತಾರೆ. ಅವರಿಗೆ ನೆರವಾಗೋಣ. ಕರ್ತವ್ಯಕ್ಕಾಗಿ ಜೀವ ಕಳೆದುಕೊಂಡವರ ಕುಟುಂಬದೊಡನೆ ಇರೋಣ ಎಂದರು. ಎಲ್ಲರಿಗೂ ಧ್ವಜ ದಿನಾಚರಣೆ ಶುಭಾಶಯ ತಿಳಿಸಿದರು.
ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ ಮಾತನಾಡಿ, ಸದಾ ಕರ್ತವ್ಯ ನಿಷ್ಠೆಯಲ್ಲಿರಬೇಕು. ಸಮಾಜದ ಒಳಗೆ ಶಾಂತಿ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದವು. ಗಣ್ಯರನ್ನು ಪರೇಡ್ ಮೂಲಕ ಬರ ಮಾಡಿಕೊಳ್ಳಲಾಯಿತು. ಪೊಲೀಸ್ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.
ಎಎಸ್ಪಿ ಆರ್.ಹೇಮಂತ್ ಕುಮಾರ್, ಡಿವೈಎಸ್ಪಿಗಳಾದ ಮುತ್ತಣ್ಣ ಸರವಗೋಳ, ಶಶೀಧರ್, ಪಿಐಗಳಾದ ಮೌನೇಶ್ವರ ಪಾಟೀಲ್, ಚಂದ್ರಪ್ಪ, ಪಿಎಸ್ಐಗಳು, ಎಚ್ಸಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.