ಹುಲಿಗಿ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ಹಾಗೂ ಸಮಿತಿ ಬಲವರ್ಧನೆ ಕಾರ್ಯಕ್ರಮದಲ್ಲಿ ಪಿಡಿಒ ಗುರುದೇವಮ್ಮ ಮಾತನಾಡಿದರು.ಕಾರ್ಯಕ್ರಮದಲ್ಲಿ ರೀಡ್ಸ್ ಸಂಸ್ಥೆಯ ತಾಲೂಕು ಸಂಯೋಜಕ ಕೆ.ಎಂ.ತಿಪ್ಪೇಸ್ವಾಮಿ, ಗ್ರಾಮ ಆಡಳಿತ ಅಧಿಕಾರಿ ಶಿವಲಿಂಗಪ್ಪ, ಲಲಿತಾ, ನೀಲಮ್ಮ ಹನಸಿ ಇತರರಿದ್ದರು.
ಮುನಿರಾಬಾದ್ : ಹುಲಿಗಿ ಗ್ರಾಮ ಪಂಚಾಯಿತಿಯನ್ನು ಸಂಪೂರ್ಣ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಮುಕ್ತವನ್ನಾಗಿ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನಡುವಿನ ಪರಸ್ಪರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ಹುಲಿಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗುರುದೇವಮ್ಮ ಹೇಳಿದರು.
ಸ್ಥಳೀಯ ಗ್ರಾಪಂ ಸಭಾಂಗಣದಲ್ಲಿ ಕೆ.ಎಚ್.ಪಿ.ಟಿ. ಸಂಸ್ಥೆ ಕೊಪ್ಪಳ, ಸ್ಪಂದನ, ರೀಡ್ಸ್ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ಹಾಗೂ ಸಮಿತಿ ಬಲವರ್ಧನೆ ಕುರಿತ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯ ತಡೆಗೆ ಸಮುದಾಯದಲ್ಲಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆಯ ತಿದ್ದುಪಡಿ ಪ್ರಕಾರ, ಕೇವಲ ಮದುವೆ ಮಾಡುವುದು ಮಾತ್ರವಲ್ಲ. ನಿಶ್ಚಿತಾರ್ಥ ಮಾಡುವುದು ಕೂಡ ಅಪರಾಧವಾಗಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಸಮಿತಿಯ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಕೆ.ಹೆಚ್.ಪಿ.ಟಿ. ಸಂಸ್ಥೆಯ ‘ಸ್ಫೂರ್ತಿ’ ಯೋಜನೆಯ ಯೋಜನಾಧಿಕಾರಿ ಮಾಲನ್ ಬಿ. ಅವರು ಸಂಸ್ಥೆಯ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ವಿವರಿಸಿದರು. ಮಾನಸಿಕ ಒತ್ತಡ ನಿರ್ವಹಣೆಯ ಆಪ್ತ ಸಮಾಲೋಚಕಿ ಕವಿತಾ ಮಡಿವಾಳ ಮಾತನಾಡಿ, ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ಬಲೆಗೆ ಬಿದ್ದು ದಾರಿ ತಪ್ಪುವ ಮಕ್ಕಳನ್ನು ಹೇಗೆ ಮುಖ್ಯವಾಹಿನಿಗೆ ತರಬೇಕು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಹೇಗೆ ತುಂಬಬೇಕು ಎಂದು ತಿಳಿಸಿದರು.