ಮೊದಲು ಪಾಲಕರು ವ್ಯಸನಮುಕ್ತರಾಗಲಿ

ಹಟ್ಟಿಯಲ್ಲಿ ಮದ್ಯಮುಕ್ತ ಗ್ರಾಮವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹೋರಾಟಗಾರ್ತಿಯರಿಗೆ ಸಂಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು, ಇಳಕಲ್‌ನ ಶ್ರೀ ಗುರು ಮಹಾಂತ ಸ್ವಾಮಿ, ರಬಕವಿ ಶ್ರೀ ಗುರು ಶಾಂತ ಸ್ವಾಮಿ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ, ಸಂಸದ ರಾಜಶೇಖರ ಹಿಟ್ನಾಳ ಇತರರಿದ್ದರು.
ಹಟ್ಟಿಯಲ್ಲಿ ಮದ್ಯಮುಕ್ತ ಗ್ರಾಮವಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಹೋರಾಟಗಾರ್ತಿಯರಿಗೆ ಸಂಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು, ಇಳಕಲ್‌ನ ಶ್ರೀ ಗುರು ಮಹಾಂತ ಸ್ವಾಮಿ, ರಬಕವಿ ಶ್ರೀ ಗುರು ಶಾಂತ ಸ್ವಾಮಿ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ, ಸಂಸದ ರಾಜಶೇಖರ ಹಿಟ್ನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳ ಗವಿಮಠದ ಶ್ರೀಗಳ ಸಲಹೆ
  • ಮದ್ಯಮುಕ್ತ ಗ್ರಾಮ ಹಟ್ಟಿಗೆ ಸಂಯಮ ಪ್ರಶಸ್ತಿ ಪ್ರದಾನ
ಕೊಪ್ಪಳ:

ಯಾರೋ ಹೇಳಿದರೆ ಅಥವಾ ಮದ್ಯ ಮಾರಾಟ ಬಂದ್ ಮಾಡಿದ ಕಾರಣಕ್ಕೆ ವ್ಯಸನ ಬಿಡುವುದಕ್ಕಿಂತ, ಅದರ ದುಷ್ಪರಿಣಾಮಗಳನ್ನು ಅರಿತು ಸ್ವಯಂಪ್ರೇರಣೆಯಿಂದ ಮದ್ಯಪಾನ ತ್ಯಜಿಸಬೇಕು ಎಂದು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಮದ್ಯಮುಕ್ತ ಗ್ರಾಮ ಹಟ್ಟಿಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 
ತಂದೆ ಮಕ್ಕಳಿಗೆ ನೈತಿಕತೆ ಹಾಗೂ ಉತ್ತಮ ನಡತೆ ಕಲಿಸುವ ಮೊದಲು ನೀವು ಯಾವುದೇ ದುಶ್ಚಟಗಳಿಗೆ ದಾಸರಾಗಬಾರದು. ಮಕ್ಕಳು ಹೀರೋ ಎಂದು ಕಾಣುವಂತಾದಾಗ ಮಾತ್ರ ತಂದೆಯ ಸ್ಥಾನ ಸಾರ್ಥಕವಾಗುತ್ತದೆ. ಆದ್ದರಿಂದ ಪಾಲಕರು ಮೊದಲು ವ್ಯಸನಮುಕ್ತರಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. 
ಹಟ್ಟಿ ಗ್ರಾಮ ಮದ್ಯಮುಕ್ತವಾಗಿರುವುದರಿಂದ ಎಷ್ಟು ಕುಟುಂಬಗಳ ಮುಖದಲ್ಲಿ ಸಂತೋಷ ಮೂಡಿದೆಯೋ ಅಷ್ಟೇ ಪ್ರಶಸ್ತಿಗಳು ಬಂದಂತಾಗಿದೆ. ಪ್ರಶಸ್ತಿಯೊಂದಿಗೆ ನೀಡಲಾಗುವ 1 ಲಕ್ಷ ರೂ. ಮೊತ್ತವನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಸೇರಿ ಎಫ್‌ಡಿ ಇಟ್ಟು, ಅದರ ಬಡ್ಡಿಯನ್ನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗೆ ನೀಡಲು ಸಲಹೆ ಕೊಟ್ಟಿರುವುದಾಗಿ ತಿಳಿಸಿದರು.
ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ, ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನನ್ನ ಬದುಕಿನ ಮೈಲಿಗಲ್ಲು. 2010ರಿಂದ ವ್ಯಕ್ತಿಗಳಿಗೆ ನೀಡುತ್ತಿದ್ದ ಸಂಯಮ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಗ್ರಾಮವೊಂದಕ್ಕೆ ನೀಡಲಾಗುತ್ತಿದೆ. ಒಂದು ವರ್ಷದಲ್ಲಿ ಸುಮಾರು ಒಂದು ಸಾವಿರ ಗ್ರಾಮಗಳನ್ನು ಮದ್ಯಮುಕ್ತಗೊಳಿಸಲು ಶ್ರಮಿಸಲಾಗುವುದು ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಹಸಿರು ಕ್ರಾಂತಿ ಮಾದರಿಯಲ್ಲಿ ದೇಶದಲ್ಲಿ ವ್ಯಸನಮುಕ್ತ ಕ್ರಾಂತಿ ನಡೆಯಬೇಕಿದೆ. ನನ್ನ ಕ್ಷೇತ್ರದ ಸುಮಾರು 10 ಗ್ರಾಮಗಳು ಮದ್ಯಮುಕ್ತವಾಗಿರುವುದು ಸಂತಸದ ಸಂಗತಿ. ಹಟ್ಟಿ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ್ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯ. ಗವಿಶ್ರೀಗಳ ನೇತೃತ್ವದಲ್ಲಿ ರಾಜ್ಯವನ್ನು ಮದ್ಯ ಹಾಗೂ ತ್ಯಾಜ್ಯಮುಕ್ತಗೊಳಿಸುವ ಚಳವಳಿ ನಡೆಯಬೇಕು ಎಂದರು.
ಇದೇ ವೇಳೆ ರಾಜ್ಯ ಗಾಂಧಿಭವನದ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು, ಹಟ್ಟಿ ಗ್ರಾಮಕ್ಕೆ ಗಾಂಧಿ ಸ್ಮಾರಕ ನಿಧಿಯಿಂದ ಗಾಂಧಿ ಪುರಸ್ಕಾರ ನೀಡುವುದಾಗಿ ಘೋಷಿಸಿದರು.
ಇಳಕಲ್‌ನ ಶ್ರೀ ಗುರು ಮಹಾಂತ ಸ್ವಾಮಿ, ರಬಕವಿ ಶ್ರೀ ಗುರು ಶಾಂತ ಸ್ವಾಮಿ, ಅಬಕಾರಿ ಡಿಸಿ ಪ್ರಶಾಂತಕುಮಾರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎನ್.ಎಸ್. ಮಹೇಶ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ, ರಾಮಣ್ಣ ಚೌಡ್ಕಿ ಇತರರಿದ್ದರು. 
ಜಿಲ್ಲೆಯ ಬಿನ್ನಾಳ, ಮದ್ನಾಳ, ನಾಗರಾಳ, ಕೆ.ಬೋದೂರು ತಾಂಡಾ, ಹಿರೇಬನ್ನಿಗೊಳ, ತಾಳಕನಕಪುರ, ಕಾಮನೂರು, ಲೆಬಗೇರಿ, ಚಿಕ್ಕೆನಕೊಪ್ಪ, ಹನುಮನಹಳ್ಳಿ ಹಾಗೂ ಹಟ್ಟಿ ಸೇರಿದಂತೆ ಒಟ್ಟು 11 ಗ್ರಾಮಗಳಿಗೆ ಸಂಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net