ಕನಕಗಿರಿ: ಮಾರುಕಟ್ಟೆಯಲ್ಲಿ ಸೊಪ್ಪಿನ ಬಳಿಕ ಕೆಲ ತರಕಾರಿಗಳ ಬೆಲೆಯೂ ಪಾತಾಳಕ್ಕೆ ಹೋಗಿದ್ದು, ಹರಾಜು ವ್ಯಾಪಾರಕ್ಕೆಂದು ಇಲ್ಲಿನ ಎಪಿಎಂಸಿಗೆ ತಂದಿದ್ದ ಟೊಮ್ಯಾಟೊ ಹಣ್ಣನ್ನು ಕೇಳುವವರಿಲ್ಲ. ಇದರಿಂದ ರೈತರು ರಸ್ತೆಗೆ ಸುರಿದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೆ ಸೂಕ್ತ ದರವಿಲ್ಲದೆ ನಷ್ಟ ಅನುಭವಿಸಿದ್ದ ಸೊಪ್ಪು ಬೆಳೆಗಾರರು ಕುರಿಗಳನ್ನು ಬಿಟ್ಟು ಫಸಲು ಮೇಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಟೊಮ್ಯಾಟೊ, ಬದನೆಕಾಯಿ ಹಾಗೂ ಸೌತೆಕಾಯಿಗೆ ದರವಿಲ್ಲದೆ ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.
ತಾಲೂಕಿನಲ್ಲಿ ಹೆಚ್ಚಾಗಿ ಟೊಮ್ಯಾಟೊ, ಸೌತೆಕಾಯಿ, ಬದನೆಕಾಯಿ ಬೆಳೆದಿದ್ದು, ಕೇಳುವವರಿಲ್ಲ. ಕೆಲವೊಮ್ಮೆ ಬಂಗಾರದ ಬೆಲೆ ಇರುವ ಟೊಮ್ಯಾಟೊ ಇದೀಗ 20ಕೆಜಿಯ 1ಬಾಕ್ಸ್ 30-50 ರೂ, 15ಕೆಜಿಯ 1 ಬಾಕ್ಸ್ ಬದನೆಕಾಯಿಗೆ 60-70 ರೂ., 1 ಕೆಜಿ ಸೌತೆಕಾಯಿ 6-7 ರೂ.ಗೆ ಮಾರಾಟವಾಗುತ್ತಿದೆ.
ಇದರಿಂದ ಸಾವಿರಾರು ರೂ. ಖರ್ಚು ಮಾಡಿ ತಿಂಗಳುಗಟ್ಟಲೇ ಶ್ರಮವಹಿಸಿದ ರೈತ ದಿಕ್ಕುತೋಚದಾಗಿದ್ದು, ಮಾಡಿದ ಖರ್ಚು ಬಾರದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ರೈತರಾದ ಶರಣಪ್ಪ, ಅಮರೇಶ, ಶಾಮಣ್ಣ ಗುರಿಕಾರ, ನಬಿಸಾಬ್, ಕನಕಪ್ಪ, ಬಸವರಾಜ ಚನ್ನಳ್ಳಿ, ಹನುಮೇಶ, ಹುಸೇನಬಾಷಾ ಗೋರಳ್ಳಿ ಅಳಲು ತೋಡಿಕೊಂಡರು.