ಗಂಗಾವತಿ; ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬದಲಾವಣೆಯಾಗುತ್ತಿದ್ದಂತೆ ಹಳೇ ಮತ್ತು ಮೂಲ ಕಾಂಗ್ರೆಸಿಗರು ಮುನ್ನೆಲೆಗೆ ಬಂದಿದ್ದು, ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆ ಸಂಕಲ್ಪ ಕೈಗೊಂಡರು. ಜಿಲ್ಲೆಯಲ್ಲಿ 2004ರವರೆಗೂ ಕಾಂಗ್ರೆಸ್ ಅಧಿಪತ್ಯ ಸಾಧಿಸಿದ್ದು, ನಂತರ ಪಕ್ಷದ ಆಂತರಿಕ ಕಚ್ಚಾಟದಿಂದ ಅಸ್ತಿತ್ವ ಕಳೆದುಕೊಂಡಿತ್ತಲ್ಲದೆ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರಕ್ಕೆ ಬಂದಿಲ್ಲ. ಮೂರು ಗುಂಪುಗಳಾಗಿದ್ದರಿಂದ ಕಾರ್ಯಕರ್ತರು ಅತಂತ್ರರಾಗಿದ್ದು, ಸ್ವಪಕ್ಷೀಯರೇ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದರು. ಮೂಲ ಕಾಂಗ್ರೆಸ್ಸಿಗರು, ಇತರ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೆ, ಉಳಿದವರು ತಟಸ್ಥರಾಗಿದ್ದರು. ಡಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ ನೇಮಕವಾಗುತ್ತಿದ್ದಂತೆ ಹಳೇ ಮತ್ತು ಮೂಲಕ ಕಾಂಗ್ರೆಸಿಗರು ಪುನಃ ಮುನ್ನೆಲೆಗೆ ಬಂದಿದ್ದಾರೆ.