ಕೊಪ್ಪಳ : ಕೊಪ್ಪಳ ವಿವಿ ತೃತೀಯ ಸಂಸ್ಥಾಪನಾ ದಿನಾಚರಣೆ ಪೂರ್ವ ಸಿದ್ಧತೆ, ಚರ್ಚೆಯಿಲ್ಲದೆ ದಿಢೀರನೆ ಆಯೋಜಿಸಿದ್ದಕ್ಕೆ ಉಪನ್ಯಾಸಕ ವೃಂದ ಅಸಮಾಧಾನ ವ್ಯಕ್ತಪಡಿಸಿದೆ. ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣ ಆಚರಣೆಗೆ ಒತ್ತಾಯಿಸಿ ಸೋಮವಾರ ಉಪನ್ಯಾಸಕರು ಕುಲಪತಿ ಡಾ. ಎಸ್.ವಿ ಡಾಣಿಗೆ ಮನವಿ ಸಲ್ಲಿಸಿದರು.
ಕಳೆದ ಮಾ.6ರಂದು ನಡೆದ ಸಭೆಯಲ್ಲಿ ವಿಶ್ವರಂಗಭೂಮಿ ಹಾಗೂ ಸಂಸ್ಥಾಪನಾ ದಿನಾಚರಣೆಗೆ ಐದು ದಿನಗಳ ನಾಟಕೋತ್ಸವ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಆಡಳಿತ ಮಂಡಳಿ ಕೇವಲ ಒಂದು ದಿನದ ನಾಟಕೋತ್ಸವಕ್ಕೆ ಸಮ್ಮತಿಸಿತ್ತು. ಹಣಕಾಸು ಕೊರತೆ ಕಾರಣ ನೀಡಿ ಈ ಬಾರಿ ಸಂಸ್ಥಾಪನಾ ದಿನಾಚರಣೆಯನ್ನೇ ಕೈಬಿಡಲು ಸೂಚಿಸಲಾಗಿತ್ತು. ಆದರೆ, ದಿಢೀರನೆ ಏ.8ರಂದು ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲು ಸುತ್ತೋಲೆ ಹೊರಡಿಸಿರುವುದು ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಉಪನ್ಯಾಸಕರ ಪ್ರಮುಖ ಬೇಡಿಕೆಗಳು
ಸಭೆ ನಡೆಸದೆ, ಆಮಂತ್ರಣ ಪತ್ರಿಕೆ ಇಲ್ಲದೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಾಂಕೇತಿಕ ಆಚರಣೆ ಆಗಲಿದೆ. ವಿದ್ಯಾರ್ಥಿಗಳ ಸಾಂಸತಿಕ ಆಸಕ್ತಿಗೆ ಹಿನ್ನಡೆ ಆಗಲಿದೆ. ಯಲಬುರ್ಗಾದಲ್ಲಿ ನಡೆಸುವ ಬದಲು ಜಿಲ್ಲಾ ಕೇಂದ್ರದಲ್ಲಿ ನಡೆಸಿ. ಸಾರ್ವಜನಿಕರು, ಸಾಹಿತಿಗಳು ಹಾಗೂ ಪೋಷಕರು ಭಾಗವಹಿಸಲು ಅನುಕೂಲವಾಗಲಿದೆ. ಆರ್ಥಿಕ ಮಿತಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಉಪನ್ಯಾಸಕರಾದ ವೀರೇಶ ಉತ್ತಂಗಿ, ಅನಂತ ಕುಮಾರ ದೊರೆ, ಶಂಕರಮೇಟಿ, ನಾಗರಾಜ, ಪ್ರವಿಣ ಪೊಲೀಸ ಪಾಟೀಲ, ಸಂತೋಷಕುಮಾರ ಎಚ್.ಕೆ. ಮೌಲಸಾಬ, ಶಂಕರಪ್ಪ ಬಿ. ಇತರರಿದ್ದರು.