ಕುಷ್ಟಗಿಯಲ್ಲಿ ಶ್ರೀಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್‌ಸಿ ಸೇವಾ ಕೇಂದ್ರದಲ್ಲಿ ಒಲಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಲಯ ಮೇಲ್ವಿಚಾರಕ ಅರುಣ್, ಸಿಎಸ್‌ಸಿ ನೋಡಲ್ ಅಧಿಕಾರಿ ರಾಘವೇಂದ್ರ, ಒಕ್ಕೂಟದ ಅಧ್ಯಕ್ಷೆ ಪಲ್ಲವಿ ಇದ್ದರು.
ಕುಷ್ಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಲಿಂಪಿಯಾಡ್ ಕಾರ್ಯಕ್ರಮದಡಿ ಸಿಎಸ್‌ಸಿ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಲಾಗುತ್ತಿದೆ ಎಂದು ವಲಯ ಮೇಲ್ವಿಚಾರಕ ಅರುಣ್ ಹೇಳಿದರು.
ನಗರದ ಗಾಂಧಿನಗರ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್‌ಸಿ ಸೇವಾ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಲಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ಮಾತನಾಡಿದರು. ತಾಲೂಕಿನಿಂದ 570 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲಾ ಪಠ್ಯಕ್ರಮದ ಜತೆ ತಾರ್ಕಿಕ ಚಿಂತನೆ, ಸಮಸ್ಯೆಗಳಿಗೆ ಪರಿಹಾರ, ಕೌಶಲ ಮತ್ತು ವಿಷಯಗಳ ಬಗ್ಗೆ ತಿಳಿಯಲು ಒಲಿಂಪಿಯಾಡ್ ಪರೀಕ್ಷೆ ಸಹಕಾರಿಯಾಗಿದೆ.
ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ ಹೆಚ್ಚುತ್ತದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ ಎಂದರು. ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸಿಎಸ್‌ಸಿ ನೋಡಲ್ ಅಧಿಕಾರಿ ರಾಘವೇಂದ್ರ, ಕೃಷಿ ಮೇಲ್ವಿಚಾರಕ ಮಹೇಶ್, ಒಕ್ಕೂಟದ ಅಧ್ಯಕ್ಷೆ ಪಲ್ಲವಿ, ಪದಾಧಿಕಾರಿಗಳಾದ ವಾಸವಿ, ಸುಧಾರಾಣಿ, ರೋಹಿಣಿ, ಶರಣಮ್ಮ, ಜಯಶ್ರೀ, ಶಾಂತಮ್ಮ, ಶಿಲ್ಪಾ ಕುಷ್ಟಗಿ ಇತರರಿದ್ದರು.