ಕೊಪ್ಪಳದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾನದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಲಿಂಗರಾಜು ಮಾತನಾಡಿದರು. ಮುನಿರಾಬಾದ್ ಸಿಎಚ್ಸಿ ಪ್ರಸೂತಿ ತಜ್ಞ ಡಾ. ಕೆ.ಹೆಚ್. ತೊಗರಿ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಗಿರೀಶ, ಯೂನಿಸೆಫ್ ಅಧಿಕಾರಿ ಹರೀಶ್ ಜೋಗಿ, ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ್ ಎಂ.ಎಚ್., ರೇಡಿಯೋಲಜಿಸ್ಟ್ ಡಾ. ದಯಾನಂದ ಸ್ವಾಮಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಲಿಂಗರಾಜು ಟಿ. ಸೂಚನೆ
ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆ
ಕೊಪ್ಪಳ : ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ. ಜಿಲ್ಲೆಯ ಎಲ್ಲಾ ಸ್ಕಾನಿಂಗ್ ಸೆಂಟರ್ಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಲಿಂಗರಾಜು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾನದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಸ್ಕಾನಿಂಗ್ ಸೆಂಟರ್ಗಳು ನಿಯಮಾನುಸಾರ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಅಥವಾ ನವೀಕರಣವಿಲ್ಲದ, ದಾಖಲೆ ನಿರ್ವಹಿಸದ ಸಂಸ್ಥೆಗಳನ್ನು ತಕ್ಷಣವೇ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಭ್ರೂಣ ಲಿಂಗ ಪತ್ತೆ ಕೃತ್ಯದಲ್ಲಿ ಭಾಗಿಯಾಗುವ ವೈದ್ಯರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ಮೊದಲ ಅಪರಾಧಕ್ಕೆ 5 ವರ್ಷ ಪರವಾನಗಿ ರದ್ದುಪಡಿಸಿದರೆ, ಎರಡನೇ ಬಾರಿ ಕಂಡುಬಂದಲ್ಲಿ ವೈದ್ಯಕಿಯ ವೃತ್ತಿಯಿಂದಲೇ ಆಜೀವ ನಿಷೇಧ ಹೇರಲಾಗುವುದು ಎಂದರು.
ಲಿಂಗ ಪತ್ತೆಗೆ ಒತ್ತಾಯಿಸುವ ಪತಿ ಅಥವಾ ಸಂಬಂಧಿಕರಿಗೂ 3&5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಜಿಲ್ಲಾ ಮಟ್ಟದ ತಪಾಸಣಾ ಸಮಿತಿಯು ಸ್ಕಾನಿಂಗ್ ಸೆಂಟರ್ಗಳ ಕಾರ್ಯವೈಖರಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಯಾವುದೇ ರೀತಿಯ ಜಾಹೀರಾತುಗಳ ಮೂಲಕ ಲಿಂಗ ಪತ್ತೆಗೆ ಪ್ರೇರೇಪಿಸುವುದು ಕಂಡುಬಂದಲ್ಲಿ ತಕ್ಷಣ ವರದಿ ನೀಡಬೇಕು ಎಂದು ತಿಳಿಸಿದರು.
ಮುನಿರಾಬಾದ್ ಸಿಎಚ್ಸಿ ಪ್ರಸೂತಿ ತಜ್ಞ ಡಾ. ಕೆ.ಹೆಚ್. ತೊಗರಿ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಗಿರೀಶ, ಯೂನಿಸೆಫ್ ಅಧಿಕಾರಿ ಹರೀಶ್ ಜೋಗಿ, ಜಿಲ್ಲಾ ಅನುಷ್ಠಾನಾಧಿಕಾರಿ ಡಾ. ರವೀಂದ್ರನಾಥ್ ಎಂ.ಎಚ್., ರೇಡಿಯೋಲಜಿಸ್ಟ್ ಡಾ. ದಯಾನಂದ ಸ್ವಾಮಿ ಇತರರಿದ್ದರು.
"
ಲಿಂಗ ತಾರತಮ್ಯ ತಡೆಯಲು ಈ ಕಾಯ್ದೆಯ ಕಟ್ಟುನಿಟ್ಟಿನ ಜಾರಿ ಅನಿವಾರ್ಯ. ಸ್ಕಾನಿಂಗ್ ಸೆಂಟರ್ಗಳು ನಿಗದಿತ ನಮೂನೆಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು.