ಕನಕಗಿರಿ ತಾಲೂಕು ಜಾಲಿಹುಡಾ ಗ್ರಾಮದ ಅಂಗನವಾಡಿಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ತಾಪಂ ಇಒ ಸಿಡಿಪಿಒ ವಿರೂಪಾಕ್ಷಿ, ಗ್ರಾಪಂ ಪಿಡಿಒ ಬಸವರಾಜ ಸಂಕನಾಳ ಇತರರಿದ್ದರು.
ಕನಕಗಿರಿ: ಜಾಲಿಹುಡಾ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ ಮಧ್ಯಾಹ್ನ 1.45ಕ್ಕೆ ದಿಢೀರ್ ಭೇಟಿ ನೀಡಿ, ಅಂಗನವಾಡಿಯಲ್ಲಿ ಮಕ್ಕಳ ಗೈರು ಕಂಡು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಕಾರ್ಯಕರ್ತೆ ವಿಜಯಲಕ್ಷ್ಮೀಯನ್ನು ವಿಚಾರಿಸಿದ ತಹಸೀಲ್ದಾರ್, ಇದುವರೆಗೂ ಮಕ್ಕಳಿದ್ದರು. ಈಗಷ್ಟೇ ಮನೆಗೆ ಹೋಗಿದ್ದಾರೆ. ಆರೋಗ್ಯ ಇಲಾಖೆಯವರು ಗ್ರಾಮಕ್ಕೆ ಬಂದಿದ್ದರಿಂದ ಅಲ್ಲಿಗೆ ತೆರಳಿದ್ದೆ ಎಂದು ಕಾರ್ಯಕರ್ತೆ ನುಣುಚಿಕೊಳ್ಳಲು ಯತ್ನಿಸಿದರು. ಅಧಿಕಾರಿಗಳು ಮಕ್ಕಳ ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ಸೋಮವಾರದ ಹಾಜರಾತಿ ಹಾಕದಿರುವುದು ಕಂಡುಬಂತು. ಈ ಹಿಂದೆ ಹಲವು ಬಾರಿ ನೋಟಿಸ್ ನೀಡಿದರೂ ಸುಧಾರಿಸಿಕೊಂಡಿಲ್ಲ ಎಂದು ಸಿಡಿಪಿಒ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡರು.
ಮೇಲ್ವಿಚಾರಕಿ ಚಂದ್ರಕಲಾ 2025ರ ಅಕ್ಟೋಬರ್ ತಿಂಗಳಲ್ಲಿ ಭೇಟಿ ನೀಡಿದ್ದು, ವಿಸಿಟ್ ಪುಸ್ತಕದಲ್ಲಿನ ವರದಿಯಿಂದ ತಿಳಿದುಬಂದಿತು. ತಹಸೀಲ್ದಾರರು ಅವರಿಗೆ ಕರೆ ಮಾಡಿ ಅಂಗನವಾಡಿ ಕಾರ್ಯಕರ್ತೆ ಕುರಿತು ಸಂಪೂರ್ಣ ವರದಿ ನೀಡುವಂತೆ ಸೂಚಿಸಿದರು. ನಂತರ ರಾಂಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳು ಭೇಟಿ ನೀಡಿ ಬಿಎಲ್‌ಒ ಆಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.