ಎರಡೂವರೆ ವರ್ಷದಲ್ಲಿ ಎಲ್ಲ ತಾಲೂಕು ಕಚೇರಿ ಆರಂಭಕ್ಕೆ ಯತ್ನ

ಕನಕಗಿರಿಯ ಲಕ್ಷ್ಮೀದೇವಿ ಕೆರೆಗೆ ಸಚಿವ ಶಿವರಾಜ ತಂಗಡಗಿ ಮಂಗಳವಾರ ಬಾಗಿನ ಅರ್ಪಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನಿರ್ಲೂಟಿ ಇತರರಿದ್ದರು.
ಕನಕಗಿರಿಯ ಲಕ್ಷ್ಮೀದೇವಿ ಕೆರೆಗೆ ಸಚಿವ ಶಿವರಾಜ ತಂಗಡಗಿ ಮಂಗಳವಾರ ಬಾಗಿನ ಅರ್ಪಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನಿರ್ಲೂಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವರಾಜ ತಂಗಡಗಿ ಹೇಳಿಕೆ
  • ಕನಕಗಿರಿ ಲಕ್ಷ್ಮೀದೇವಿ ಕೆರೆಗೆ ಬಾಗಿನ ಅರ್ಪಣೆ
  • ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವೆ
ಕನಕಗಿರಿ: ಇನ್ನುಳಿದ ಎರಡೂವರೆ ವರ್ಷದ ಅಧಿಕಾರವಧಿಯಲ್ಲಿ ಪಟ್ಟಣದಲ್ಲಿ ಬಾಕಿ ಇರುವ ಎಲ್ಲ ತಾಲೂಕು ಕಚೇರಿಗಳನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೃಷ್ಣ ಬಿ ಸ್ಕೀಂ ಹಾಗೂ ತುಂಗಭದ್ರಾ ಕೆರೆ ತುಂಬಿಸುವ ಯೋಜನೆಯಡಿ ತುಂಬಿದ ಇಲ್ಲಿನ ಲಕ್ಷ್ಮೀದೇವಿ ಕೆರೆಗೆ ಮಂಗಳವಾರ ತಂಗಡಗಿ ಅಭಿಮಾನಿಗಳಿಂದ ಹಮ್ಮಿಕೊಳ್ಳಲಾಗಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.
ಕೃಷ್ಣ ಬಿ ಸ್ಕೀಂ ಯೋಜನೆಯಲ್ಲಿ ಇಲ್ಲದ ಕನಕಗಿರಿ ತಾಲೂಕಿನ ಕೆರೆಗಳನ್ನು 2010ರಲ್ಲಿ ಸೇರಿಸುವ ಕೆಲಸ ಮಾಡಿದ್ದೀನಿ. ಅಧಿಕಾರದಲ್ಲಿದ್ದಾಗ ಏನಾದರೂ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕನಕಗಿರಿ ತಾಲೂಕು ಕೇಂದ್ರವನ್ನಾಗಿ ಮಾಡಿದ್ದಲ್ಲದೇ, ಕೆರೆ ತುಂಬಿಸುವ ಮೂಲಕ ಹಸಿರಾಗಿಸುವ ಪ್ರಯತ್ನ ಮಾಡಿದ್ದೇನೆ. ರೈಸ್ ಟೆಕ್ ಪಾರ್ಕ್ ತಂದಿದ್ದೇನೆ. ಸಿರವಾರದಲ್ಲಿ ತೋಟಗಾರಿಕಾ ಪಾರ್ಕ್ ಮಾಡುವುದು ನನ್ನ ಆಸೆ. ಅದನ್ನೂ ಮಾಡುತ್ತೇನೆ ಎಂದರು.
ಯಾರು ಅಂತಾ ಗೊತ್ತಿಲ್ಲದ ನನ್ನನ್ನು ಕನಕಗಿರಿ ಕ್ಷೇತ್ರಕ್ಕೆ ಆಗಮಿಸಿದ್ದಾಗ ಅನೇಕರು ಅನೇಕ ಅಪಪ್ರಚಾರ ಮಾಡಿದರು. ಇದೇ ವಿಚಾರಕ್ಕೆ ನನ್ನ ಪತ್ನಿ ಕಣ್ಣೀರು ಸುರಿಸಿದ್ದರು. ಇದಾವುದಕ್ಕೂ ನಾನು ಎದೆಗುಂದಲಿಲ್ಲ. ನಾನು ಏನು ಅಂತ ತಿಳಿದ ಪಟ್ಟಣದ ಜನತೆ ಶಾಸಕನಾಗಿ ಆಯ್ಕೆ ಮಾಡಿ, ಮೂರು ಬಾರಿ ಸಚಿವನಾಗುವಂತೆ ಮಾಡಿದ್ದಾರೆ. ಈಗ ಕೆರೆಗಳ ಭರ್ತಿಯಿಂದ ರೈತರು ಆರ್ಥಿಕವಾಗಿ ಬಲಿಷ್ಠರಾಗುತ್ತಿರುವುದು ನನಗೆ ಸಂತಸವಾಗಿದೆ ಎಂದರು. ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿದರು.
ಇದಕ್ಕೂ ಮೊದಲು ಶ್ರೀ ಕನಕಾಚಲ ದೇವಸ್ಥಾನದಿಂದ ಶ್ರೀಕೃಷ್ಣ ದೇವಸ್ಥಾನದವರೆಗೆ ಮಹಿಳೆಯರ ಕುಂಭ, ಕಳಸ, ನಾನಾ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ತಾಲೂಕು ಅಧ್ಯಕ್ಷ ಹಜರತ್ ಹುಸೇನ್, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಸದಸ್ಯರಾದ ಶರಣೇಗೌಡ, ಅನಿಲ್ ಬಿಜ್ಜಳ, ಸಿದ್ದೇಶ ಕಲುಬಾಗಿಲಮಠ, ರಾಕೇಶ ಕಂಪ್ಲಿ, ರಾಜಾಸಾಬ್ ನಂದಾಪುರ, ಸಂಗಪ್ಪ ಸಜ್ಜನ್, ಶಾಂತಪ್ಪ ಬಸರಿಗಿಡ ಇತರರಿದ್ದರು.

ಆಂಬುಲೆನ್ಸ್ ಲೋಕಾರ್ಪಣೆ

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾದ ಆಂಬುಲೆನ್ಸ್ ಹಾಗೂ ಗಂಗಾ ಪರಮೇಶ್ವರಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದರು.

ಕೊಠಡಿಗಾಗಿ ಕಣ್ಣೀರು ಹಾಕಿದ ಶಿಕ್ಷಕಿ

ಆಮಬುಲೆನ್ಸ್ ಲೋಕಾರ್ಪಣೆ ಬಳಿಕ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾರ್ಗವಾಗಿ ತೆರಳುತ್ತಿದ್ದ ಸಚಿವರನ್ನು ವಿದ್ಯಾರ್ಥಿಗಳು ನಿಲ್ಲಿಸಿ, ಹಲವು ದಶಕಗಳ ಹಳೆಯದಾದ ಶಾಲೆಯ ಪರಿಸ್ಥಿತಿ ಪರಿಶೀಲಿಸುವಂತೆ ಒತ್ತಾಯಿಸಿದ್ದರಿಂದ ಶಾಲೆಯೊಳಗೆ ಸಚಿವರು ತೆರಳಿ ಸಮಸ್ಯೆ ಆಲಿಸುತ್ತಿದ್ದಾಗ ದೈಹಿಕ ಶಿಕ್ಷಕಿ ಸುನಿತಾ ಪತ್ತಾರ ಶಾಲೆಗೆ ಕೊಠಡಿಗಳ ನೀಡುವಂತೆ ಕಣ್ಣೀರು ಹಾಕಿದರು. ಇದನ್ನು ಗಮನಿಸಿದ ಸಚಿವರು, ಶಿಕ್ಷಕಿಯ ಶಾಲೆ ಮೇಲಿನ ಪ್ರೀತಿ ಕಂಡು ಸಂತೈಸಿದರು. ಶಿಕ್ಷಕರನ್ನು ಕೊಡುವ ಜತೆಗೆ ಕೊಠಡಿಗಳನ್ನು ನೀಡುವ ಭರವಸೆ ನೀಡಿದರು.

ಹೈಕಮಾಂಡ್ ನಾಯಕರ ಭೇಟಿ ತಪ್ಪಲ್ಲ

ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ. ಡಿಸಿಎಂ ಸಿಎಂ ಆಗುವ ವಿಚಾರವೂ ಗೊತ್ತಿಲ್ಲ. ಸಂಪುಟ ಪುನರ್ ರಚನೆ ಹೈಕಮಾಂಡ್ ತೀರ್ಮಾನ. ನಮ್ಮ ಪಕ್ಷದಲ್ಲಿ ಸಮರ್ಥ ನಾಯಕರಿದ್ದು, ಅವರು ಎಲ್ಲವನ್ನೂ ಪರಿಹರಿಸುತ್ತಾರೆ. ಕೆಲ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ತಪ್ಪೇನಿದೆ? ಶಾಸಕರಾದವರಿಗೆ ಸಚಿವರಾಗಬೇಕೆನ್ನುವ ಆಸೆ ಇರುತ್ತದೆ. ನಾನು ಸಿಎಂ, ಡಿಸಿಎಂ ಪರ ಎನ್ನುವುದಕ್ಕಿಂತ ಕಾಂಗ್ರೆಸ್ ಪರ. ಖರ್ಗೆಯವರನ್ನು ಕಾಮನ್ ಆಗಿ ಭೇಟಿಯಾಗಿದ್ದೇನೆ. ವರದಿ ತೆಗೆದುಕೊಂಡಿಲ್ಲ. ಬಸವರಾಜ ರಾಯರಡ್ಡಿಯವರ ಹೇಳಿಕೆ ಅವರ ವೈಯಕ್ತಿಕ ಎಂದು ಸಚಿವ ತಂಗಡಗಿ ಕನಕಗಿರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net