ನಗರದ ಎಚ್‌ಆರ್‌ಜಿ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಕೈಗಾದಲ್ಲಿ ಅಣುಸ್ಥಾವರ ಇದ್ದರೂ, ಮತ್ತೊಂದು ಅಣು ಸ್ಥಾವರಕ್ಕಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಕೊಪ್ಪಳ ತಾಲೂಕಿನ ಬನ್ನಿಕುಂಟ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಿದ್ದು, ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಂಡಿದೆ. ಅಣುಸ್ಥಾವರದಿಂದ ಮಾನವ, ಕೃಷಿ ಮತ್ತು ಜೀವ ವೈವಿಧ್ಯತೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದಕ್ಕೆ ಕೈಗಾ ಸಾಕ್ಷಿಯಾಗಿದ್ದು, ಮಾರಕವಾದ ಅಣುಸ್ಥಾವರ ಯೋಜನೆ ಜಿಲ್ಲೆಯಲ್ಲಿ ಬೇಡ. ಕೇಂದ್ರ ಸರ್ಕಾರ ಗುರುತಿಸಿರುವ ಬನ್ನಿಕುಂಟದಲ್ಲಿ 8ಸಾವಿರ ಎಕರೆ ಕಂದಾಯ ಮತ್ತು ಅರಣ್ಯ ಭೂಮಿಯಿದ್ದು, ಅಪರೂಪದ ಜೀವ ವೈವಿಧ್ಯಗಳು ವಾಸಿಸುತ್ತಿವೆ. ಸನಿಹದಲ್ಲಿ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿ ಮತ್ತು ಶೀಘ್ರದಲ್ಲಿ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಲಿರುವ ಮೋರೆರ್ ಬೆಟ್ಟ ಉದ್ದೇಶಿತ ಪ್ರದೇಶದ ಕೂಗಳತೆಯಲ್ಲಿದೆ. ಇನ್ನೂ ಐತಿಹಾಸಿಕ ಹಿನ್ನೆಲೆಯಲ್ಲಿ ಗಂಡುಗಲಿಕುಮಾರರಾಮ ಸೇರಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು, ಪ್ರಾಗೈತಿಹಾಸಿಕ ಬೃಹತ್ ಶಿಲಾಯುಗದ ನೆಲೆಯ ಮೋರೆರ್ ಶಿಲಾಸಮಾಧಿಗಳು, ಗವಿ ಚಿತ್ರಗಳಿವೆ. ಅಣುಸ್ಥಾವರ ಯೋಜನೆ ಅನುಷ್ಠಾನಗೊಂಡರೆ ಇತಿಹಾಸ, ಪರಿಸರ ಮತ್ತು ಸಂಸ್ಕೃತಿ ಮೇಲೆ ಪರಿಣಾಮ ಬೀರಲಿದ್ದು, ಕೃಷಿ ಚಟುವಟಿಕೆ ಮತ್ತು ಮನುಸಂಕುಲದ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದರು.