ಮಹಿಳಾ ಆಯೋಗ ಅಧ್ಯಕ್ಷೆ ಎದುರು ಅಳಲು ತೋಡಿಕೊಂಡ ಜನ

ಕೊಪ್ಪಳದ ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮೀ ಚೌಧರಿ ಸಮಸ್ಯೆಗಳ ಕುರಿತು ಗಮನ ಸೆಳೆದರು.
ಕೊಪ್ಪಳದ ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮೀ ಚೌಧರಿ ಸಮಸ್ಯೆಗಳ ಕುರಿತು ಗಮನ ಸೆಳೆದರು.
Published on

ಪ್ರಮುಖ ಮುಖ್ಯಾಂಶಗಳು

  • ನಮಗೆ ಉತ್ತಮವಾಗಿ ಬದುಕುವ ಭಾಗ್ಯ ಇಲ್ರೀ
  • ಕಾರ್ಯಾಗಾರ, ಜನರ ಭೇಟಿ
ಕೊಪ್ಪಳ: ನಮಗೆ ಚೊಲೊ ಬದುಕೊ ಭಾಗ್ಯ ಇಲ್ರಿ. ಎಲ್ರೂ ರ್ಬತಾರ ಎಲ್ಲ ಮಾಡ್ತಿವಿ ಅಂತಾರ ಮತ್ತೆ ಯಾರೂ ಬರಂಗಿಲ್ರಿ. ಮೊದಲಿನಿಂದಲೂ ಇಷ್ಟೇ ಇದೆ ನಮ್​ ಬದುಕು...
ನಗರದ ಸಿದ್ದೇಶ್ವರ ನಗರದ ಅಲೆಮಾರಿ ಸಮುದಾಯ ಜನರು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಬಳಿ ಈ ರೀತಿ ಶುಕ್ರವಾರ ಅಳಲು ತೋಡಕೊಂಡರು. ವಾರಕ್ಕೊಮ್ಮೆ ಕುಡಿವ ನೀರು ಬರುತ್ತೆ, ಚರಂಡಿ, ರಸ್ತೆ, ವಿದ್ಯುತ್​ ಯಾವ ಸೌಲಭ್ಯವಿಲ್ಲ. ಅನೇಕರಿಗೆ ನಿವೇಶನ ಸಹ ಇಲ್ಲ. ಬೇರೊಬ್ಬರ ಜಾಗದಲ್ಲಿ ಜೋಪಡಿ ಹಾಕಿಕೊಂಡಿದ್ದೇವೆಂದು ಜನರು ಅಳಲು ತೋಡಿಕೊಂಡರು. ಸಮಸ್ಯೆ ಪರಿಹಾರ ಕೋರಿ ಕೆಲವರು ಕಾಲಿಗೆ ಬಿದ್ದು ಕಣ್ಣೀರಾದರು. ಅಂಗನವಾಡಿ ಸಮೀಪದಲ್ಲೇ ರೈಲು ಹಳಿ ಇದೆ. ತಡೆಗೋಡೆ ಇಲ್ಲ. ಮಕ್ಕಳನ್ನು ಕಳಿಸಲು ಹೆದರಿಕೆ ಆಗುತ್ತದೆ. ಇತ್ತೀಚಿನವರೆಗೂ, ಕುಡಿವ ನೀರು, ವಿದ್ಯುತ್​ ಸಂಪರ್ಕ ಇರಲಿಲ್ಲವೆಂದು ಸಮಸ್ಯೆಗಳನ್ನು ತೆರೆದಿಟ್ಟರು.
ಮಹಿಳೆಯೊಬ್ಬರ ಇಬ್ಬರು ಮಕ್ಕಳಿಗೆ ಕಣ್ಣಿನ ಸಮಸ್ಯೆ ಇದ್ದು, ತೋರಿಸಲು ಹಣವಿಲ್ಲ. ಔಷಧಕ್ಕೂ ದುಡ್ಡಿಲ್ಲವೆಂದು ಅಳಲು ತೋಡಿಕೊಂಡರು. ತಕ್ಷಣ ಡಿಎಚ್​ಒ ಅವರನ್ನು ಸ್ಥಳಕ್ಕೆ ಕರೆಸಿದ ಅಧ್ಯೆ, ಎಬಿಆರ್​ಕೆಯಡಿ ಆಪರೇಷನ್​ ಹಾಗೂ ಆರ್​ಬಿಎಸ್​ಕೆಯಡಿ ಔಷಧ ಉಚಿತ ಪೂರೈಕೆಗೆ ಸೂಚಿಸಿದರು. ಅನ್ಯಜಾತಿ ವ್ಯಕ್ತಿಯನ್ನು ಮದುವೆಯಾದ ಮಹಿಳೆಗೆ ಕುಟುಂಬದಿಂದ ದೌರ್ಜನ್ಯವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಡಿವೈಎಸ್ಪಿಗೆ ಕಾನೂನು ಕ್ರಮಕ್ಕೆ ತಾಕೀತು ಮಾಡಿದರು. ವಿವಿಧ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ನಿರ್ದೇಶಿಸಿದರು.

ಮಗನನ್ನು ಚೆನ್ನಾಗಿ ಓದಿಸು

ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ನಾಗಲಕ್ಷ್ಮೀ, ತಾಯಿ-ಮಕ್ಕಳ ಆರೋಗ್ಯ ವಿಚಾರಿಸಿದರು. ಸೌಲಭ್ಯಗಳ ದೊರೆಯುವಿಕೆ ಬಗ್ಗೆ ಸ್ವತ: ರೋಗಿಗಳಿಂದ ಮಾಹಿತಿ ಪಡೆದರು. ಮಗುವನ್ನು ಎತ್ತಿಕೊಂಡು ಮುದ್ದಾಡಿದರು. ತಾಯಿಗೆ ಮಗು ತುಂಬಾ ಮುದ್ದಾಗಿದ್ದಾನೆ. ಚೆನ್ನಾಗಿ ಓದಿಸು. ಅಧಿಕಾರಿ ಮಾಡಿ ಜನ ಸೇವೆ ಮಾಡಲು ತಿಳಿಸುವಂತೆ ಹೇಳಿದರು. ಗುತ್ತಿಗೆ ನೌಕರರು ತಮಗೆ ಆಗುತ್ತಿರುವ ವೇತನ ತಾರತಮ್ಯ ಬಗ್ಗೆ ಗಮನ ಸೆಳೆದರು. ತಕ್ಷಣ ಸರಿಪಡಿಸುವಂತೆ ಕಿಮ್ಸ್​ ನಿರ್ದೇಶಕರಿಗೆ ತಾಕೀತು ಮಾಡಿದರು. ಗಂಡನಿಂದ ತೊಂದರೆಗೆ ಒಳಗಾದ ಮಹಿಳೆ ಹಾಗೂ ಮಗನಿಂದ ತೊಂದರೆ ಅನುಭವಿಸುತ್ತಿರುವ ಅಜ್ಜಿಯೊಬ್ಬರು ಸಮಸ್ಯೆ ಹೇಳಿಕೊಂಡರು. ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶಿಸಿ ಪರಿಹರಿಸುವ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net