ಅಲ್ಲದೇ, ಗುತ್ತಿಗೆ ಕೆಲಸಗಳನ್ನು ಬಿಜೆಪಿ ಕಾರ್ಯಕರ್ತರು ಹಿಡಿದಾಗ ದ್ವೇಷ ರಾಜಕಾರಣ ನಡೆಸುತ್ತಿದ್ದು, ತಮ್ಮ ಕಾರ್ಯಕರ್ತರಿಗೆ ಕೆಲಸ ನೀಡುತ್ತಾ ರಿಪಬ್ಲಿಕ್ ಆಫ್ ಕನಕಗಿರಿ ಮಾಡಿದ್ದಾರೆ. ಸಾಲದೆಂಬಂತೆ ಕಾಂಗ್ರೆಸ್‌ನ ಎಲ್ಲ ನಾಯಕರಲ್ಲಿ ಸಚಿವ ತಂಗಡಗಿ ಮಾತ್ರ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಲು ಪದೇ ಪದೇ ದೇಶದ ಪ್ರಧಾನಿಯನ್ನು ತೇಜೋವಧೆ ಮಾಡುತ್ತಿದ್ದಾರೆ. ಆದರೆ, ತಂಗಡಗಿ ಸಚಿವರಾದ ನಂತರ ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡದಂತಹ ಪರಿಸ್ಥಿತಿಯಿದೆ. ದಕ್ಷ ಅಧಿಕಾರಿಗಳಿಗೆ ಜೀವಭಯ ಕಾಡುತ್ತಿದ್ದು, ಹಿಂದೆ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಸಹ ಆಕ್ರೋಶಗೊಂಡು ಇವರ ವಿರುದ್ಧ ಮಣ್ಣು ತೂರಿದ ನಿದರ್ಶನವಿದೆ. ಅಲ್ಲದೇ, ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಮುಖ್ಯಾಧಿಕಾರಿಯೇ ಪುರಸಭೆ ಅಧ್ಯಕ್ಷರು ಗೂಂಡಾ ಆಗಿದ್ದಾರೆಂದು ಬಹಿರಂಗವಾಗಿ ಹೇಳಿದ್ದು ರಾಜ್ಯವೇ ನೋಡಿದೆ. ಆಡಳಿತಾತ್ಮಕ ಬಿಕ್ಕಟ್ಟು ಸೃಷ್ಟಿಯಾದಾಗ ಮುಖ್ಯಾಧಿಕಾರಿ ಕಾನೂನು ಮೊರೆ ಹೋಗುವ ಬದಲು ಧರಣಿ ನಡೆಸಿದ್ದು, ಇಬ್ಬರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.