ಮುದ್ದಾಬಳ್ಳಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ

ಮುದ್ದಾಬಳ್ಳಿ ಶ್ರೀ ಮಾರುತೇಶ್ವರ ದೇವಸ್ಥಾನ ಮುಂಭಾಗಲ್ಲಿ ಯುವಕರು ಮುಳ್ಳಿನ ಕೊಂಪಿಯಲ್ಲಿ ಹಾರುತ್ತಿರುವುದು.
ಮುದ್ದಾಬಳ್ಳಿ ಶ್ರೀ ಮಾರುತೇಶ್ವರ ದೇವಸ್ಥಾನ ಮುಂಭಾಗಲ್ಲಿ ಯುವಕರು ಮುಳ್ಳಿನ ಕೊಂಪಿಯಲ್ಲಿ ಹಾರುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಯುವಕರು-ಮಹಿಳೆಯರು ಮಹೋತ್ಸವ ಯಶಸ್ಸಿಗೆ ಸಾಕ್ಷಿ
ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ಅತ್ಯಂತ ಭಕ್ತಿಭಾವದಿಂದ ಶನಿವಾರ ಸಮಾರೋಪಗೊಂಡಿತು.
ಯುಗಾದಿ ಪಾಡ್ಯದ ಶುಭ ದಿನದಂದು ಮಾರುತೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಹೊಸ ವರ್ಷದ ಸಂಭ್ರಮದೊಂದಿಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಸಂಜೆ ನಡೆದ ಲಘು ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು. ವಾದ್ಯಮೇಳಗಳ ನಾದ ಹಬ್ಬದ ಖಳೆ ನೀಡಿತು.
ಗ್ರಾಮಸ್ಥರು ಹೊಸ ವರ್ಷದ ಸಂಕಲ್ಪದೊಂದಿಗೆ ತಮ್ಮ ಮನೆಯಿಂದ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ದೇವರಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಈಗಾಗಲೇ ಸಂಕಲ್ಪಗಳು ಈಡೇರಿದ ಭಕ್ತರು ವಿವಿಧ ಹರಕೆಗಳನ್ನು ತೀರಿಸುವ ಮೂಲಕ ತಮ್ಮ ಭಕ್ತಿ ಮೆರೆದರು. ಜಾತ್ರೆಯ ಎರಡನೇ ದಿನವಾದ ಶುಕ್ರವಾರ ನಡೆದ ಮುಳ್ಳಿನ ಹರಕೆಯ ಮೆರವಣಿಗೆ ಭಕ್ತರ ಗಮನ ಸೆಳೆಯಿತು. ಶ್ರೀ ಸಣ್ಣ ಹನುಮಪ್ಪ ದೇವಸ್ಥಾನದಿಂದ ಆರಂಭವಾದ ಈ ಮೆರವಣಿಗೆಯು ರಾಜಬೀದಿಗಳ ಮೂಲಕ ಸಾಗಿ ಮಾರುತೇಶ್ವರ ದೇವಸ್ಥಾನಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಯುವಕರು ಮತ್ತು ಮಕ್ಕಳು ಮುಳ್ಳಿನ ಕೊಂಪಿಯಲ್ಲಿ ಮಿಂದೇಳುವ ಮೂಲಕ ತಮ್ಮ ಅಚಲ ಭಕ್ತಿಯನ್ನು ಪ್ರದರ್ಶಿಸಿದರು. ಸಂಜೆ ದೇವಸ್ಥಾನದ ಆವರಣದಲ್ಲಿ ನಡೆದ ಕೊಂಡೋತ್ಸವವು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಜಾತ್ರೆಯ ಅಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾರುತೇಶ್ವರನ ಕೃಪೆಗೆ ಪಾತ್ರರಾದರು. ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಾಕ್ಷಿಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net