ಕನಕಗಿರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬಂದ್ ನಿಮಿತ್ತ ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರೈತ ಸಂಘದ ಶರಣೇಗೌಡ ಮಾತನಾಡಿದರು. ಪ್ರಮುಖರಾದ ಹರೀಶ ಪೂಜಾರ, ಬಸವರಾಜ ಕೋರಿ, ಹನುಮೇಶ ಭಜಂತ್ರಿ, ಮಲ್ಲಮ್ಮ ಹೂಗಾರ ಇತರರಿದ್ದರು.
ಬಂದ್ ನಿಮಿತ್ತ ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರೈತ ಸಂಘದ ಶರಣೇಗೌಡ ಮಾತನಾಡಿದರು. ಪ್ರಮುಖರಾದ ಹರೀಶ ಪೂಜಾರ, ಬಸವರಾಜ ಕೋರಿ, ಹನುಮೇಶ ಭಜಂತ್ರಿ, ಮಲ್ಲಮ್ಮ ಹೂಗಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾಗವಹಿಸದ ಸಾರ್ವಜನಿಕರು
  • ಅಂಗಡಿ ಮುಚ್ಚಿ ಸಹಕರಿಸಿದ ವ್ಯಾಪಾರಿಗಳು
  • ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ವ್ಯಾಪಾರ ಆರಂಭ
ಕನಕಗಿರಿ: ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ, ಕನ್ನಡಪರ ಸಂಘಟನೆಗಳು ಹಾಗೂ ನಾನಾ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಕನಕಗಿರಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಮೇಲುಗಡೆ ಅಗಸೆಯಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ವಾಲ್ಮೀಕಿ ವೃತ್ತದವರೆಗೆ ನಡೆಯಿತು. ಬಂದ್ ನಿಮಿತ್ತ ಎಪಿಎಂಸಿಯಲ್ಲಿ ಅಂಗಡಿಗಳು, ಎಗ್‌ರೈಸ್ ಬಂಡಿಗಳು, ಹೊಟೇಲ್‌ಗಳ ಮಾಲೀಕರು ಬಂದ್ ಮಾಡಿ ಬೆಂಬಲ ಸೂಚಿಸಿದರು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಪ್ರತಿಭಟನಾ ಮೆರವಣಿಗೆ ಆರಂಭವಾಗುತ್ತಿದ್ದಂತೆ ವ್ಯಾಪಾರಸ್ಥರು ಅಂಗಡಿ ಮುಚ್ಚಿ ಸಹಕಾರ ನೀಡಿದರು. ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ವ್ಯಾಪಾರ ಆರಂಭಿಸಿದರು. ಬಂದ್ ಮೆರವಣಿಗೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿರಲಿಲ್ಲ.
ವಾಲ್ಮೀಕಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಶರಣೇಗೌಡ ಮಾತನಾಡಿ, ಕ್ಷೇತ್ರದ ಶಾಸಕರೇ ಸಚಿವರಾಗಿದ್ದಾರೆ. ಸಚಿವರು ಮನಸ್ಸು ಮಾಡಿದರೆ, ಯಾವಾಗಲಾದರೂ ಅಭಿವೃದ್ಧಿಪಡಿಸಬಹುದು. ಆದರೆ, ಕಾರಟಗಿ ಬಗ್ಗೆ ತೋರುವ ಉತ್ಸಾಹ ಕನಕಗಿರಿಗೆ ಇಲ್ಲವಾಗಿದೆ. ಸಚಿವರು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ನೀತಿ ಅನುಸರಿಸುತ್ತಿದ್ದಾರೆ. ನಕಲಿ ಬೀಜದ ಹಾವಳಿಯಿಂದ ರೈತರು ನಷ್ಟ ಅನುಭವಿಸಿದ್ದಾರೆ. ತಾಲೂಕು ಕೇಂದ್ರವಾದರೂ ಬಿಇಒ ಕಚೇರಿ, ಜೆಸ್ಕಾಂ ಎಇಇ ಕಚೇರಿ, ಎಡಿಎ, ಬಸ್ ಡಿಪೋ ಕಚೇರಿಗಳು ಆರಂಭವಾಗಿಲ್ಲ. ರಸ್ತೆಗಳಂತೂ ಅದೋಗತಿಗೆ ತಲುಪಿವೆ. ನಾನು ಅಭಿವೃದ್ಧಿ ಹರಿಕಾರ, ನೂರಾರು ಕೋಟಿ ರೂ. ಅನುದಾನ ತಂದಿದ್ದೇನೆ ಎಂದಿದ್ದಾರೆ. ಆದರೆ, ನಮಗೆ ಅನುದಾನದ ಪಟ್ಟಿ ಬೇಡ ಭೌತಿಕವಾಗಿ ಕನಕಗಿರಿ ತಾಲೂಕಿನ ಅಭಿವೃದ್ಧಿ ತೋರಿಸಲಿ. ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು.
ರೈತ ಸಂಘದ ತಾಲೂಕು ಅಧ್ಯಕ್ಷ (ಎಚ್.ಬಸವರಾಜಪ್ಪ ಬಣ) ಗಣೇಶರೆಡ್ಡಿ ಮಾತನಾಡಿ, ರೈತರ ಎಲ್ಲ ಬೆಳೆಗಳಿಗೆ ವರ್ಷ ಪೂರ್ತಿ ಖರೀದಿ ಕೇಂದ್ರ ತೆರದಿರಬೇಕು. ಅಗ್ನಿಶಾಮಕ, ಆರೋಗ್ಯ ಇಲಾಖೆ, ನ್ಯಾಯಾಲಯ, ಶಾಸಕರ ಕಚೇರಿ, ತೋಟಗಾರಿಕೆ ಸೇರಿ ವಿವಿಧ ತಾಲೂಕು ಕಚೇರಿಗಳನ್ನು ಆರಂಭಿಸಬೇಕು. ಕಾಲಮಿತಿಯೊಳಗೆ ಫಾರಂ 3 ನೀಡಬೇಕು. ತೆರವು ಮಾಡಲಾದ ಎಪಿಎಂಸಿ ಕಾಂಪೌಂಡ್ ನಿರ್ಮಿಸಬೇಕು. ತ್ರಿವೇಣಿ ಸಂಗಮ ಸ್ವಚ್ಛಗೊಳಿಸಬೇಕು. ಶಿಕ್ಷಕರ ಕೊರತೆ ನೀಗಿಸಬೇಕು. ಕೊಪ್ಪಳಕ್ಕೆ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕನಕಗಿರಿಯಲ್ಲಿನ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ದುರ್ಗಾದಾಸ ಯಾದವ, ಬಿ.ವೀರೇಶ, ಲಾಲಸಾಬ ಜೂಲಿಕೇರಿ, ಬಸವರಾಜ ದೇಸಾಯಿ, ಮುದಿಯಪ್ಪ ಕುರುಬರ, ಪರಶುರಾಮ, ಸಣ್ಣ ಹನುಮನಗೌಡ, ಪಂಪಣ್ಣ ನಾಯಕ, ಸಗರಪ್ಪ ಕಂಪ್ಲಿ, ಪಲ್ಲವಿ ಶರಣಪ್ಪ, ವೀರಭದ್ರಪ್ಪ ಗುಗ್ಗಳಶೆಟ್ರ, ಮರಿಯಪ್ಪ ಹುಗ್ಗಿ, ಮಮ್ಮದರಫಿ, ನಾಗರಾಜ ಕಿನ್ನಾಳ, ಮಲ್ಲಮ್ಮ ಹೂಗಾರ, ದೇವಮ್ಮ ಹುಲಿಹೈದರ, ಸಿಂಧೂ ಬಲ್ಲಾಳ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net