ಟಿಬಿಡ್ಯಾಂ ಗೇಟ್​ ಅಳವಡಿಕೆಗಿಲ್ಲ ಅಡ್ಡಿ : ತಂಗಡಗಿ

TB DAM GATE
TB DAM GATE
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನ ವಾಪಸ್​ ಪಡೆದಿಲ್ಲ ಸರ್ಕಾರ
  • ಸಚಿವ ಶಿವರಾಜ ತಂಗಡಗಿ ಸ್ಪಷ್ಟನೆ
ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಕೆಗೆ ಅನುದಾನ ಕೊರತೆ ಇಲ್ಲ. ಮೇ ಮಾಸಾಂತ್ಯದೊಳಗೆ 33 ಗೇಟ್​ ಅಳವಡಿಸಿ ರೈತರಿಗೆ ನೀರು ಒದಗಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಭರವಸೆ ನೀಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಣಕಾಸು ಇಲಾಖೆ 2025 ಡಿಸೆಂಬರ್​ 8ರಂದು ಅನುದಾನ ಬಿಡುಗಡೆ ಮಾಡಿದೆ. ಈವರೆಗೆ 11 ಕೋಟಿರೂ. ಗುತ್ತಿಗೆದಾರರಿಗೆ ಪಾವತಿಸಿದ್ದೇವೆ. 3.80 ಕೋಟಿ ರೂ. ಬಿಲ್​ ಸಲ್ಲಿಸಿದ್ದು, ಮಂಗಳವಾರದೊಳಗೆ ಬಿಡುಡಗೆಯಾಗಲಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಮಾಜಿ ಸಚಿವ ವೆಂಕಟರಾವ್​ ನಾಡಗೌಡರು ಮಾಹಿತಿ ಇಲ್ಲದೇ ಆರೋಪ ಮಾಡುತ್ತಾರೆ. ಜನೆವರಿ 30ರೊಳಗೆ 7 ಗೇಟ್​ ಕೂಡಿಸುತ್ತೇವೆ. 18,11,19,04, 20 ಗೇಟ್​ ಈಗಾಗಲೇ ರೆಡಿ ಆಗಿವೆ. ಪ್ರತಿ ತಿಂಗಳು ಆರು ಗೇಟ್​ ಕೂಡಿಸುವುದಾಗಿ ಗುತ್ತಿಗೆ ಕಂಪನಿಯೊಂದಿಗೆ ಒಪ್ಪಂದ ಆಗಿದೆ ಎಂದರು.
ಫೆಬ್ರವರಿ ತಿಂಗಳಲ್ಲಿ 8 ಗೇಟ್​ ಕೂಡಿಸಲಾಗುವುದು. ಒಟ್ಟು 19 ಗೇಟ್​ ಸಿದ್ಧವಾಗಿವೆ. ಗದಗ, ಹೊಸಪೇಟೆಯಲ್ಲಿ ನಾಲ್ಕು ಸಿದ್ಧವಾಗುತ್ತಿವೆ. 8 ಗೇಟ್​ ಪೂರ್ಣ ತೆರವಾಗಿವೆ. ಒಂದು ತೆಗೆಯಲಾಗುತ್ತಿದೆ. ಎರಡು ತಂಡ ನಿರಂತರ ಕಾರ್ಯಾಚರಣೆ ಮಾಡುತ್ತಿವೆ. ಕೆಲಸ ಸುಗಮವಾಗಿ ಸಾಗಿದೆ. ರೈತರು ಆತಂಕಪಡಬೇಕಿಲ್ಲ. ಮಾಹಿತಿ ಕೊರತೆಯಿಂದ ಕನ್ನಯ್ಯ ನಾಯ್ಡು ಮಾತನಾಡಿದ್ದಾರೆ. ಬೋರ್ಡ್​ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಜಲಾಶಯ ನಿರ್ಮಾಣ ಆದಾಗಿನಿಂದಲೂ ಮರು ಪಾವತಿ, ಬುಕ್​ ಅಡ್ಜೆಸ್ಟ್​ಮೆಂಟ್​ ಮೇಲೆ ಅನುದಾನ ಹೊಂದಿಕೆ ಮಾಡಲಾಗಿದೆ. ಇದೇ ಮೊದಲ ಬಾರಿ ಮುಂಚೆಯೇ ಅನುದಾನ ಒದಗಿಸಿರುವುದು. ವಿಷಯ ಸಿಎಂ, ಡಿಸಿಎಂ ಗಮನಕ್ಕೆ ತಂದು ತಪ್ಪೆಸಗಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಸಮರ್ಥಿಸಿಕೊಂಡರು.
ಬಿಜೆಪಿ ಜಿಲ್ಲಾಧ್ಯಕ್ಷ ದಢೇಸುಗೂರು ಅವರಿಗೆ ಕಾಲು ಜಂಗು ಹಿಡಿದಿವೆ. ಇನ್ನೆಲ್ಲಿ ಪಾದಯಾತ್ರೆ ಮಾಡುತ್ತಾರೆ ? ರೈತರ ಹಿತದೃಷ್ಟಿಯಿಂದ ಗೇಟ್​ ಕೂಡಿಸುತ್ತೇವೆ. ಆಮೇಲೆ ಬೇಕಿದ್ದರೆ ಇವರು ಪಾದಯಾತ್ರೆ ಮಾಡಲಿ ಎಂದು ಟಾಂಗ್​ ನೀಡಿದರು.
ನಾನು ಸಚಿವನಾದ ಮೇಲೆ 212 ಹಾಸ್ಟೆಲ್​ ರಾಜ್ಯಕ್ಕೆ ನೀಡಲಾಗಿದೆ. 1.42 ಲಕ್ಷ ಮಕ್ಕಳಿಗೆ ಹಾಸ್ಟೆಲ್​ ಸಿಕ್ಕಿಲ್ಲ. ವಿದ್ಯಾಸಿರಿ ನೀಡುತ್ತಿದ್ದೇವೆ. ಅವರಿಗೆಲ್ಲ ಇನ್ನು 250 ಹಾಸ್ಟೆಲ್​ ಅವಶ್ಯವಿದೆ. ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಮಾಡಿರುವೆ. ಕೊಪ್ಪಳ ಜಿಲ್ಲೆಗೆ 12 ವಸತಿ ನಿಲಯ ಮಂಜೂರು ಮಾಡಿರುವೆ ಎಂದು ತಿಳಿಸಿದರು.

ಉತ್ಸವ ದಿನಾಂಕ ನಿಗದಿ

ಆನೆಗೊಂದಿ ಹಾಗೂ ಕನಕಗಿರಿ ಉತ್ಸವ ಮಾಡೇ ಮಾಡುತ್ತೇವೆ. ದಿನಾಂಕ ನಿಗದಿ ಕೆಲಸ ನಡೆದಿದೆ. ಕಳೆದ ವರ್ಫಿ ಉತ್ಸವ ದಿನ ನಿಗದಿ ಮಾಡಲಾಗಿತ್ತು. ಆದರೆ, ಜನ ಬೇಡ ಎಂದಿದ್ದಕ್ಕೆ ಮಾಡಲಿಲ್ಲ. ನಾನೇ ಮೊದಲು ಕನಕಗಿರಿ ಉತ್ಸವ ಆರಂಭಿಸಿದ್ದು. ಇವಾಗಲೂ ಮಾಡುತ್ತೇವೆ. ಜಿಲ್ಲಾ ರಂಗ ಮಂದಿರಕ್ಕೆ ಮೂರು ಕೋಟಿ ರೂ. ಅನುದಾನ ಕೋರಿ ಕೆಕೆಆರ್ಡಿಬಿಗೆ ಪ್ರಸ್ತಾವೆನೆ ಸಲ್ಲಿಸಲಾಗಿದೆ. ಬಂದ ತಕ್ಷಣ ಪೂರ್ಣಗೊಳಿಸುತ್ತೇವೆ.

ಜಿಲ್ಲಾ ನ್ಯಾಯಾಲಯ, ಕಾರಟಗಿ, ಕನಕಗಿರಿ ಜೆಎಂಎಫ್​ಸಿ ನ್ಯಾಯಾಲಯ ಮಾಡಲಾಗುವುದು. ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿಮಾರ್ಣ. ಹೊಸ ತಾಲೂಕುಗಳಿಗೆ ವಿವಿಧ ಇಲಾಖೆಯ ಹೊಸ ಕಚೇರಿ ತರಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net