ಕನಕಗಿರಿ: ತಾಲೂಕಿನ ಅಡವಿಬಾವಿ ಚಿಕ್ಕತಾಂಡಾ ನಿವಾಸಿಗಳು ಹೊಟ್ಟೆಪಾಡಿಗಾಗಿ ಕಬ್ಬು ಕಡಿಯಲು ತೆರಳಿದ್ದರಿಂದ ತಾಂಡಾ ಬಿಕೋ ಎನ್ನುತ್ತಿದೆ.
ಗ್ರಾಮದಲ್ಲಿ ಕಳೆದೊಂದು ವಾರದಿಂದ 22 ಲಾರಿಗಳಲ್ಲಿ ಸುಮಾರು 400 ಜನರು ಕೆಲಸ ಅರಸಿ ಹುಬ್ಬಳ್ಳಿ, ಕಲಘಟಗಿ ಭಾಗಕ್ಕೆ ಕಬ್ಬು ಕಟಾವಿಗೆ ಹೋಗಿದ್ದಾರೆ. ಗುಳೆ ಹೊರಟವರು ತಮ್ಮ ಜತೆ ಚಿಣ್ಣರು ಸೇರಿದಂತೆ ಒಂದರಿಂದ ಐದನೇ ತರಗತಿವರೆಗಿನ ಮಕ್ಕಳನ್ನು ಸಹ ಕರೆದೊಯ್ದಿದ್ದಾರೆ.
ಇದರಿಂದ ತಾಂಡಾದಲ್ಲಿ ವೃದ್ಧರು ಹಾಗೂ ಶಾಲೆಗೆ ತೆರಳುವ ಕೆಲವೇ ವಿದ್ಯಾರ್ಥಿಗಳು ಮಾತ್ರ ಕಾಣಸಿಗುತ್ತಿದ್ದಾರೆ. ಗ್ರಾಪಂನಿಂದ ಕಾರ್ಮಿಕರಿಗೆ ಕೆಲಸ ನೀಡಿಲ್ಲವಾದ್ದರಿಂದ ನಮ್ಮ ತಾಂಡಾದವರು ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ನರೇಗಾದಡಿ ಕಾಮಗಾರಿಗಳು ಅಪೂರ್ಣವಾಗಿವೆ. ಈ ಬಗ್ಗೆ ಗಮನಕ್ಕೆ ತಂದರೂ ಕಿವಿಗೊಡುತ್ತಿಲ್ಲ ಎಂದು ತಾಂಡಾದ ಯುವಕರು ದೂರುತ್ತಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು ಶಾಲೆಯನ್ನು ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುವವರ ಹಿಂದೆ ತೆರಳುತ್ತಿರುವುದರಿಂದ ಶೈಕ್ಷಣಿಕ ಭವಿಷ್ಯಕ್ಕೂ ಸಮಸ್ಯೆ ಆಗುತ್ತಿದೆ. ಪ್ರತಿ ವರ್ಷ ಗುಳೆ ಹೋಗುವುದು ಇಲ್ಲಿ ಸಾಮಾನ್ಯವಾಗಿದ್ದು, ತಾಲೂಕು ಆಡಳಿತ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ.
ಈ ಬಗ್ಗೆ ಪಿಡಿಒ ಹಾಗೂ ಸಿಬ್ಬಂದಿಯೊಂದಿಗೆ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು.