ಅಳವಂಡಿ: ನಾವು ನಮ್ಮ ಬದುಕನ್ನು ಸ್ವಾರ್ಥದಿಂದ ಕಟ್ಟಿಹಾಕದೆ, ಕುಟುಂಬ, ಸಮಾಜ ಮತ್ತು ಇತರರ ಹಿತಕ್ಕಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಂಡರಗಿಯ ಶ್ರೀ ಜಗದ್ಗುರು ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ವಾರ್ಷಿಕೋತ್ಸವ ಮತ್ತು ಶ್ರೀ ಜ.ಅ. ವಿದ್ಯಾ ಸಮಿತಿಯ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಗುರುವಾರ ಮಾತಾನಾಡಿದರು.
ಪರೋಪಕಾರಂ ಇದಂ ಶರೀರಂ ಬದುಕಿನ ಸಾರ್ಥಕತೆ ಅಡಗಿರುವುದೇ ಇತರರ ಸೇವೆಯಲ್ಲಿ. ಕನಿಷ್ಠ ನಮಗಾಗಿ ಮತ್ತು ನಮ್ಮವರಿಗಾಗಿ ಜತೆಯಲ್ಲಿ ಇತರರಿಗಾಗಿ ಎಂಬುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಮನುಷ್ಯ ಇತರರ ಒಳ್ಳೆಯದಕ್ಕಾಗಿ ಎಷ್ಟು ದುಡಿಯುತ್ತಾನೋ ಅಷ್ಟು ದೊಡ್ಡ ವ್ಯಕ್ತಿಯಾಗುತ್ತಾನೆ ಎಂದು ಮಹಾತ್ಮ ಗಾಂಧಿಜೀ ಹೇಳಿದ್ದಾರೆ. ಗೌತಮ ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಮಹಾತ್ಮರು ತಮ್ಮ ಕುಟುಂಬಕ್ಕಾಗಿ ಏನನ್ನೂ ಮಾಡಲಿಲ್ಲ. ಆದರೆ ನಾವುಗಳು ಮತ್ತು ಇಡೀ ದೇಶ ಈಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ. ಕಾರಣ ಅವರ ಸಮಾಜಮುಖಿ ಸೇವೆಗಳು. ಇವುಗಳು ನಮ್ಮಿಂದಲೂ ಆಗಬೇಕಿದೆ ಎಂದರು.
ಬೆಟಗೇರಿ ಸಮಸ್ತ ಸದ್ಭಕ್ತರು ಮುಂಡರಗಿಯ ವಿದ್ಯಾಸಮಿತಿ ಶತಮಾನೋತ್ಸವಕ್ಕೆ 51 ಸಾವಿರ ರೂ. ದೇಣಿಗೆ ನೀಡಿ ಪೂಜ್ಯರಿಗೆ ಗುರುವಂದನೆ ಸಲ್ಲಿಸಿದರು.