ಕನಕಗಿರಿ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯ ಡಾ.ಜಾಜಿ ದೇವೇಂದ್ರಪ್ಪ ಉದ್ಘಾಟಿಸಿದರು. ಉಪನ್ಯಾಸಕರಾದ ವಿಜಯ್ ಸರೋದೆ, ಹುಲಿಗೆಮ್ಮ, ರಕ್ಷಿತ್.ಎ, ಡಾ. ವೀರೇಶ್ ಕೆಂಗಲ್, ಸರ್ವಮಂಗಳಮ್ಮ.ಟಿ.ಆರ್, ನಫೀಸ್ ಬಾನು ಇತರರಿದ್ದರು.
ಕನಕಗಿರಿ : ಭಾರತ ವಿಶ್ವದಲ್ಲೇ ಅತ್ಯಧಿಕ ಯುವಜನತೆ ಹೊಂದಿರುವ ದೇಶವಾಗಿದ್ದರೂ, ಉತ್ಪಾದಕತೆ ವಿಚಾರದಲ್ಲಿ ಮಾತ್ರ ಸಾಕಷ್ಟು ಹಿಂದುಳಿದಿರುವುದು ಶೋಚನೀಯ ಎಂದು ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯ ಡಾ. ಜಾಜಿ ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಬಿಎ ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಲಕ್ಷಾಂತರ ಯುವಕರು ಪದವಿ ಮುಗಿಸಿ ಹೊರಬರುತ್ತಿದ್ದಾರಾದರೂ, ಅದರಲ್ಲಿ ಉದ್ಯೋಗಗಳನ್ನು ಪಡೆಯಲು ಬೇಕಾದ ಜ್ಞಾನ ಹಾಗೂ ಕೌಶಲಗಳನ್ನು ಹೊಂದಿರುವವರು ಕೆಲವೇ ಕೆಲವರು ಮಾತ್ರ. ಜೆನ್-ಜಿ ಯುವಕರಲ್ಲಿ ಉತ್ಸಾಹ ಹಾಗೂ ಸಾಧನೆಗೆ ಬೇಕಾದ ಕಲೆ-ಸಾಮರ್ಥ್ಯ ಇದೆಯಾದರೂ, ಅದನ್ನು ಬಳಸಿಕೊಂಡು ಬೆಳೆಯುತ್ತಿರುವವರು ಮಾತ್ರ ತೀರಾ ಕಡಿಮೆ ಎಂದರು.
ಉಪನ್ಯಾಸಕ ಶರಣಪ್ಪ ಹೊಸಳ್ಳಿ ಮಾತನಾಡಿ, ತಕ್ಷಣಕ್ಕೆ ಸಿಗುವ ಸಣ್ಣ-ಸಣ್ಣ ಸುಖಗಳು ಜೀವನಕ್ಕೆ ಬೇಕಾದ ದೊಡ್ಡ ಸುಖವನ್ನೇ ಕಸಿದುಕೊಳ್ಳುತ್ತವೆ. ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳನ್ನು ಬರಿ ಮೋಜು-ಮಸ್ತಿಯಂತಹ ಕಾಲಹರಣ ಸಂಗತಿಗಳಲ್ಲಿ ವ್ಯಯ ಮಾಡದೇ, ಜೀವನಕ್ಕೆ ಬೇಕಾದ ಜ್ಞಾನ ಹಾಗೂ ಕೌಶಲಗಳನ್ನು ಕಟ್ಟಿಕೊಳ್ಳಲು ಬಳಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ. ಬಜರಂಗಬಲಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಲಲಿತಾ .ಎನ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದಿಂದ ‘ಜ್ಞಾನ ಸ್ಫೂರ್ತಿ’ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.