ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡಿ

ಕೊಪ್ಪಳದಲ್ಲಿ ಶುಕ್ರವಾರ ನಗರದ ಎಲ್ಲಾ ಚಿಕ್ಕಪುಟ್ಟ ಬೀದಿಬದಿ ವ್ಯಾಪಾರಿಗಳು ಡಿಸಿ ಕಚೇರಿ ಮುಂದೆ ಬೃಹತ್​ ಪ್ರತಿಭಟನೆ ನಡೆಸಿದರು.
ಕೊಪ್ಪಳದಲ್ಲಿ ಶುಕ್ರವಾರ ನಗರದ ಎಲ್ಲಾ ಚಿಕ್ಕಪುಟ್ಟ ಬೀದಿಬದಿ ವ್ಯಾಪಾರಿಗಳು ಡಿಸಿ ಕಚೇರಿ ಮುಂದೆ ಬೃಹತ್​ ಪ್ರತಿಭಟನೆ ನಡೆಸಿದರು.
Published on
ಕೊಪ್ಪಳ :ನಗರ ವ್ಯಾಪ್ತಿಯಲ್ಲಿ ದಶಕಗಳಿಂದ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿರುವ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲು ನಗರಸಭೆ ನೀಡಿರುವ ನೋಟಿಸ್​ ಈಗ ನೂರಾರು ಕುಟುಂಬಗಳಲ್ಲಿ ಆತಂಕ ಮೂಡಿಸಿದೆ. ಮೊದಲು ನಮಗೆ ಪರ್ಯಾಯ ವ್ಯವಸ್ಥೆ ಮಾಡಿ, ಆಮೇಲೆ ತೆರವು ಮಾಡಿ ಎಂದು ಚಿಕ್ಕಪುಟ್ಟ ಬೀದಿಬದಿ ವ್ಯಾಪಾರಸ್ಥರ ಹಿತರಕ್ಷಣಾ ಸಂಘದ ಅಧ್ಯಕ್ಷ ರಹಮತ್​ ಉಲ್ಲಾ ಶಬ್ಬೀರ್​ ಆಗ್ರಹಿಸಿದರು.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ನಗರದ ಎಲ್ಲಾ ಬೀದಿಬದಿ ವ್ಯಾಪಾರಿಗಳು ಬೃಹತ್​ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದ ಜ. 19 ರಂದು ನಗರಸಭೆಯು ಏಕಾಏಕಿ ಅಂಗಡಿ ತೆರವುಗೊಳಿಸುವಂತೆ ನೋಟಿಸ್​ ನೀಡಿದೆ. ಇದರಿಂದ ಕಳೆದ 30-&40 ವರ್ಷಗಳಿಂದ ಇದೇ ವೃತ್ತಿಯನ್ನು ನಂಬಿಕೊಂಡಿರುವ ವ್ಯಾಪಾರಿಗಳ ಬದುಕು ಅಯೋಮಯವಾಗಿದೆ. ಅನೇಕರು ನಗರಸಭೆಯ ಮೂಲಕವೇ ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದು, ಈಗ ಅವರ ಬದುಕು ಆತಂಕದ ಸ್ಥಿಯಲ್ಲಿದೆ ಎಂದರು.
ಈ ಹಿಂದೆ ಸಾಹಿತ್ಯ ಭವನ ಮತ್ತು ಕಣ್ಣಿನ ಆಸ್ಪತ್ರೆ ನಿಮಾರ್ಣದ ಸಂದರ್ಭದಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆ ಸಮಯದಲ್ಲಿ ಅಂದಿನ ಶಾಸಕ ದಿವಂಗತ ಮಲ್ಲಿಕಾರ್ಜುನ ದಿವಟರ್​ ಮತ್ತು ಮಾಜಿ ಸಂಸದ ಎಚ್​.ಜಿ.ರಾಮುಲು ಅವರು ಹೊಸ ಬಸ್​ ನಿಲ್ದಾಣ ಹಾಗೂ ಜೆ.ಪಿ.ಮಾರ್ಕೆಟ್​ ಬಳಿ ಸೂಕ್ತ ಸ್ಥಳಾವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆಗಳು ವರ್ಷಗಳು ಕಳೆದರೂ ಇನ್ನೂ ಕಾಗದದ ಮೇಲೆಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀಡಿರುವ ತೆರವು ನೋಟಿಸ್​ ಅನ್ನು ಕೂಡಲೇ ಹಿಂಪಡೆಯಬೇಕು, ನಗರದ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಸುಸಜ್ಜಿತವಾದ ಪರ್ಯಾಯ ಸ್ಥಳ ಗುರುತಿಸಬೇಕು, ಬೀದಿಬದಿ ವ್ಯಾಪಾರಿಗಳ ಜೀವನಕ್ಕೆ ಆಸರೆಯಾಗುವಂತಹ ಶಾಶ್ವತ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಜಮಲ್​ ದಫೇದಾರ ಹಾಗೂ ವ್ಯಾಪಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net