ಕೊಪ್ಪಳ : ಯಾವುದೇ ಪೋಷಕರಿಗೆ ಮಗು ಬೇಡವಾದಲ್ಲಿ ಅದನ್ನು ಎಲ್ಲೆಂದರಲ್ಲಿ ಎಸೆದು ಜೀವಕ್ಕೆ ಕುತ್ತು ತರಬಾರದು. ಅಂತಹ ಮಕ್ಕಳನ್ನು ಸುರಕ್ಷಿತವಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ತಿಳಿಸಿದರು.
ಜಿಲ್ಲೆಯ ಕಾರಟಗಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಸುರಕ್ಷತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗುವನ್ನು ಸಮಿತಿಗೆ ಹಸ್ತಾಂತರಿಸುವ ಪೋಷಕರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಗೊಳಿಸುವುದಿಲ್ಲ. ಅನಾಥ ಅಥವಾ ಪರಿತ್ಯಕ್ತ ಮಕ್ಕಳ ಪುನರವಸತಿಗಾಗಿ ಸರ್ಕಾರ ದತ್ತು ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಕಾನೂನುಬಾಹಿರವಾಗಿ ದತ್ತು ಪಡೆಯುವುದು ಅಥವಾ ನೀಡುವುದು ಗಂಭೀರ ಅಪರಾಧ. ಮಕ್ಕಳ ನ್ಯಾಯ ಕಾಯ್ದೆ -2015ರ ಕಲಂ 81ರನ್ವಯ ಇಂತಹ ಪ್ರಕರಣಗಳಲ್ಲಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಸಾಧನೆ
2015 ರಿಂದ ಜಿಲ್ಲೆಯಲ್ಲಿ ಈವರೆಗೆ 65 ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ 44 ಮಕ್ಕಳನ್ನು ದೇಶಿಯ ಪಾಲಕರಿಗೆ ಹಾಗೂ 9 ಮಕ್ಕಳನ್ನು ವಿದೇಶಿ ಪಾಲಕರಿಗೆ ಕಾನೂನುಬದ್ಧವಾಗಿ ದತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿ. ಈ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸಹಕರಿಸಬೇಕು ಎಂದು ವಿನಂತಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಗೌರಿಶಂಕರ, ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಪಟ್ಟಣಶೆಟ್ಟರ್, ಲೀಗಲ್ ಕಂ ಪ್ರೋಬೇಫಿನ್ ಆಫೀಸರ್ ಶಿವಲೀಲಾ ವನ್ನೂರು, ರವಿಕುಮಾರ್ ಪವಾರ್ ಇತರರಿದ್ದರು.