ಕಳೆದುಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರ

ಕೊಪ್ಪಳ ಜಿಲ್ಲಾ ಪೋಲಿಸ್​ ಇಲಾಖೆಗೆ ನೂತನವಾಗಿ ನೀಡಲಾದ ಮೊಬೈಲ್​ ಾರೇನ್ಸಿಕ್​ ಲ್ಯಾಬ್​ ವಾಹನಕ್ಕೆ ಬಳ್ಳಾರಿ ವಲಯ ಪೊಲೀಸ್​ ಮಹಾ ನಿರೀಕ್ಷಕ ಡಾ. ಪಿ.ಎಸ್​. ಹರ್ಷ ಚಾಲನೆ ನೀಡಿದರು. ಡಾ. ರಾಮ್​ ಎಲ್​. ಅರಸಿದ್ದಿ ಇದ್ದರು.
ಕೊಪ್ಪಳ ಜಿಲ್ಲಾ ಪೋಲಿಸ್​ ಇಲಾಖೆಗೆ ನೂತನವಾಗಿ ನೀಡಲಾದ ಮೊಬೈಲ್​ ಾರೇನ್ಸಿಕ್​ ಲ್ಯಾಬ್​ ವಾಹನಕ್ಕೆ ಬಳ್ಳಾರಿ ವಲಯ ಪೊಲೀಸ್​ ಮಹಾ ನಿರೀಕ್ಷಕ ಡಾ. ಪಿ.ಎಸ್​. ಹರ್ಷ ಚಾಲನೆ ನೀಡಿದರು. ಡಾ. ರಾಮ್​ ಎಲ್​. ಅರಸಿದ್ದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪೊಲೀಸರ ಕಾರ್ಯಕ್ಕೆ ಐಜಿ ಶ್ಲಾಘನೆ
  • 252 ಕಳ್ಳತನ ಪ್ರಕರಣ 1.82 ಕೋಟಿ ಮೌಲ್ಯದ ಸ್ವತ್ತು ಪತ್ತೆ
ಕೊಪ್ಪಳ : ಜಿಲ್ಲೆಯಾದ್ಯಂತ ಕಳೆದ ಒಂದೂವರೆ ವರ್ಷದಲ್ಲಿ ದಾಖಲಾಗಿದ್ದ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ 1.82 ಕೋಟಿ ರೂ. ಮೌಲ್ಯದ ಕಳುವಾದ ಸ್ವತ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿರುವುದು ಪೊಲೀಸ್​ ಇಲಾಖೆ ದಕ್ಷತೆಗೆ ಸಾಕ್ಷಿಯಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್​ ಮಹಾ ನಿರೀಕ್ಷಕ ಡಾ. ಪಿ.ಎಸ್​. ಹರ್ಷ ಹೇಳಿದರು.
ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ ಸೋಮವಾರ ನಡೆದ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮುದ್ದೆಮಾಲು ಹಸ್ತಾಂತರ ಹಾಗೂ ಪೊಲೀಸ್​ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
2025ರ ಜನವರಿ 1ರಿಂದ 2026ರ ಜೂನ್​ 30ರವರೆಗೆ ಜಿಲ್ಲೆಯಲ್ಲಿ ಡಕಾಯಿತಿ, ದರೋಡೆ, ಸರಗಳ್ಳತನ, ಮನೆ ಕಳ್ಳತನ, ಜಾನುವಾರು ಕಳ್ಳತನ ಸೇರಿದಂತೆ 252 ಸ್ವತ್ತಿನ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 104 ಪ್ರಕರಣಗಳನ್ನು ಭೇದಿಸಿ 1,82,45,960 ರೂ. ಮೌಲ್ಯದ ಮುದ್ದೆಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಸಿ.ಇ.ಐ.ಆರ್​. ಪೋರ್ಟಲ್​ ಮೂಲಕ ಪತ್ತೆಯಾದ 1905 ಮೊಬೈಲ್​ಗಳು, 988.960 ಗ್ರಾಂ ಚಿನ್ನ, 10.938 ಕೆಜಿ ಬೆಳ್ಳಿ, 43.33 ಲಕ್ಷ ರೂ. ನಗದು, 6 ನಾಲ್ಕು ಚಕ್ರದ ವಾಹನಗಳು, 3 ತ್ರಿಚಕ್ರ ವಾಹನಗಳು ಹಾಗೂ 34 ದ್ವಿಚಕ್ರ ವಾಹನಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.
ಕುಷ್ಟಗಿ ಪ್ರಕಾಶ್​ ಎಂಬ ವ್ಯಕ್ತಿಯ ಮನೆಯಲ್ಲಿದ್ದ ಸುಮಾರು 180 ಗ್ರಾಂ ಬೆಳ್ಳಿಯನ್ನು ಕಳವು ಮಾಡಲಾಗಿತ್ತು. ಪ್ರಕರಣವನ್ನು ಭೇದಿಸಿ ಸಂಪೂರ್ಣ ಬೆಳ್ಳಿಯನ್ನು ಮರಳಿ ನೀಡಲಾಗಿದೆ. ಕೊಪ್ಪಳದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ದಂಪತಿಯ ಮನೆಯಿಂದ ಕಳವಾಗಿದ್ದ ಸುಮಾರು 9 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಲಾಗಿದೆ. ಯಲಬುರ್ಗಾದ ಜಾನುವಾರು ಕಳ್ಳತನ ಪ್ರಕರಣವನ್ನು 24 ಗಂಟೆಯೊಳಗೆ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆರೋಪಿಗಳನ್ನು ಬಂಧಿಸಲಾಗಿದೆ. ಹನುಮಸಾಗರದ ಚಿನ್ನಾಭರಣ ಅಂಗಡಿಯಿಂದ ಕಳುವಾಗಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನೂ ಪತ್ತೆ ಮಾಡಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್​ಎಸ್​ಎಲ್​ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಪೊಲೀಸ್​ ಕುಟುಂಬದ 53 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ, ಹೆಚ್ಚುವರಿ ಎಸ್​ಪಿ ಆರ್​. ಹೇಮಂತ್​ ಕುಮಾರ್​ ಕೊಪ್ಪಳ ಡಿವೈಎಸ್ಪಿಗಳಾದ ಮುತ್ತಣ್ಣ ಸರವಗೋಳ, ಶಶಿಧರ, ನ್ಯಾಮಗೌಡ, ಪಿಐಗಳಾದ ಕೆ. ಜಯಪ್ರಕಾಶ, ವಿಶ್ವನಾಥ ಹಿರೇಗೌಡರ, ಸುರೇಶ ಬಿ. ಇತರರಿದ್ದರು.

ಲಾಕ್​ ಹೌಸ್​ ವಾಚ್​ ಮತ್ತು ಆಸರೆ ಯೋಜನೆ

ಮನೆಗೆ ಬೀಗ ಹಾಕಿ ಊರಿಗೆ ತೆರಳುವವರು ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದರೆ ಲಾಕ್​ ಹೌಸ್​ ವಾಚ್​ ಯೋಜನೆಯಡಿ ಮನೆಗಳಿಗೆ ಪೊಲೀಸ್​ ಕಾವಲು ಒದಗಿಸಲಾಗುತ್ತಿದೆ. ಅಲ್ಲದೆ ಒಂಟಿಯಾಗಿ ವಾಸಿಸುವ ವೃದ್ಧರು ಹಾಗೂ ಹಿರಿಯ ನಾಗರಿಕರಿಗಾಗಿ ಆಸರೆ ಯೋಜನೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯ 184 ಮನೆಗಳನ್ನು ಮ್ಯಾಪ್​ ಮಾಡಿ ವಿವಿಧ ಇಲಾಖೆಗಳ ಸೇವೆಗಳನ್ನು ಸಮನ್ವಯಗೊಳಿಸಲಾಗುತ್ತಿದೆ.

ಮನೆಮಗನಿಂದಲೆ ಕಳ್ಳತನ

ಕುಷ್ಟಗಿಯ ಶಿಕ್ಷಕರೊಬ್ಬರ ಮಗನನ್ನು ದುಷ್ಟರ್ಮಿಗಳು ಸಿಗರೇಟ್​ ಸೇರಿದಂತೆ ದುಶ್ಚಟಗಳಿಗೆ ಸೆಳೆದು, ಆತನಿಂದಲೇ ಸುಮಾರು 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಕಳವು ಮಾಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ನವೀನ್​ ಮತ್ತು ಬಸವರಾಜರನ್ನು ಬಂಧಿಸಿ 13 ತೊಲ ಚಿನ್ನ ಸೇರಿದಂತೆ ಬಹುತೇಕ ಸ್ವತ್ತನ್ನು ವಶ.
"

ಸೈಬರ್​ ಅಪರಾಧಗಳು ಜಿಲ್ಲೆಯ ಗಡಿ ಮೀರಿ ನಡೆಯುವ ಕಾರಣ, ಘಟನೆ ನಡೆದ ಒಂದು ಗಂಟೆಯೊಳಗೆ ಮಾಹಿತಿ ನೀಡಿದರೆ ಹಣ ಅಥವಾ ವಹಿವಾಟನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ. ಒಂದು ವಾರದ ಬಳಿಕ ದೂರು ನೀಡಿದರೆ ಪತ್ತೆ ಕಾರ್ಯ ಕಷ್ಟಕರವಾಗುತ್ತದೆ. ಆದ್ದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿರಂತರ ಅಭಿಯಾನ ನಡೆಸಲಾಗುತ್ತಿದೆ. ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ "ಆಪರೇಷನ್​ ರೈಸ್​' ಹಾಗೂ "ಬೇಡ ಬ್ರೋ' ಅಭಿಯಾನದ ಮೂಲಕ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಶೆಮುಕ್ತ ಕರ್ನಾಟಕ ನಿಮಾರ್ಣಕ್ಕೆ ಪೊಲೀಸ್​ ಇಲಾಖೆ ಬದ್ಧವಾಗಿದೆ.

— ಡಾ. ಪಿ.ಎಸ್​. ಹರ್ಷ, ವಲಯ ಪೊಲೀಸ್​ ಮಹಾ ನಿರೀಕ್ಷಕ ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net