ಕೊಪ್ಪಳ : ತಾಲೂಕಿನ ನಾರಾಯಣಪೇಟೆ, ರಾಮರಾಜಪೇಟೆ ವ್ಯಾಪ್ತಿಯ ಹಂಪಿ ಬೋಲ್ಡರ್ಸ್, ಹಂಪಿ ಫೆದರ್, ಹಂಪಿ ವಿಸ್ಕರ್ಸ್ ರೆಸಾರ್ಟ್ಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.
50 ಎಕರೆಯಷ್ಟು ನದಿ, ಸರ್ಕಾರಿ ಭೂಮಿ ಒತ್ತುವರಿ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಸಣಾಪುರದ ವಿಜಯ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಹಿಂದೆಯೂ ಸರ್ಕಾರಿ ಭೂಮಿ ಒತ್ತುವರಿ ಸಂಬಂಧ ಆರೋಪ ಕೇಳಿ ಬಂದಿದ್ದವು. ಇದೀಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ದಾಖಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಎಸ್.ಪಿ. ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲೋಕೇಶ ನೇತೃತ್ವದಲ್ಲಿ ಪಿಐಗಳಾದ ಸುನಿಲ್, ರಾಜೇಶ್ ಮತ್ತು ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾದರು. ಕೊಪ್ಪಳ ಹಾಗೂ ವಿಜಯನಗರ ಪೊಲೀಸರು ತಂಡದಲ್ಲಿದ್ದರು.
ಈ ಭಾಗದಲ್ಲಿ ಪಟ್ಟಾ ಭೂಮಿ, ಕಂದಾಯ ಹಾಗೂ ಅರಣ್ಯ ಇಲಾಖೆ ಭೂಮಿಗಳ ಸರ್ವೇ ಸಂಖ್ಯೆಗಳು ಮಿಳಿತಗೊಂಡಿವೆ. ಇಲಾಖೆಗಳ ಗಡಿ ನಿಗದಿಯಾಗಿಲ್ಲ. ಸರಿಯಾದ ಹದ್ದುಬಸ್ತು, ನಕಾಶೆ, ಗಡಿ ರೇಖೆಗಳಿಲ್ಲ. ಬಹುದಿನದಿಂದಲೂ ಈ ಬಗ್ಗೆ ದೂರುಗಳು, ತನಿಖೆ ನಡೆದರೂ ಪರಿಹಾರ ಸಿಗುತ್ತಿಲ್ಲ.
ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗುತ್ತಲೇ ದಾಳಿ ನಡೆದಿದ್ದು ದಾಖಲೆಗಳು ಹಾಗೂ ವಾಸ್ತವದಲ್ಲಿ ಭೂಮಿ ಅತಿಕ್ರಮವಾದ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸರ್ವೇ ಅಧಿಕಾರಿಗಳೊಂದಿಗೆ ತೆರಳಿದ ಪೊಲೀಸರು ಸ್ಥಳದಲ್ಲೇ ದಾಖಲೆಗಳ ಸತ್ಯಾಸತ್ಯತೆ ಪರಿಶೀಲನೆ ಜತೆಗೆ ಸರ್ವೇ ಸಹ ಮಾಡಿಸುತ್ತಿದ್ದಾರೆನ್ನಲಾಗಿದೆ. ಇನ್ನೊಂದೆರಡು ದಿನದವರೆಗೂ ಈ ಕಾರ್ಯ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.