ಕನಕಗಿರಿ: ವೆನಿಜುವೆಲಾ ಮೇಲಿನ ಅಮೆರಿಕಾ ಮಿಲಿಟರಿ ದಾಳಿ ಖಂಡಿಸಿ ಸಿಪಿಎಂ ಪಕ್ಷದಿಂದ ಮಂಗಳವಾರ ನಗರದ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತನಾಡಿ, ವೆನೆಜುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿದ್ದರಿಂದ ಮಡುರೋರನ್ನು ಪದಚ್ಯುತಿಗೊಳಿಸಲು ಅಮೆರಿಕಾ ಮಿಲಿಟರಿ ಕಾರ್ಯಾಚರಣೆ ನಡೆಸಿದೆ.
ಒಂದು ಸಾರ್ವಭೌಮ, ಸ್ವಾತಂತ್ರೃ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರದ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಆಕ್ರಮಣದ ಮೂಲಕ ಅಪಹರಿಸಿರುವುದು ದೌರ್ಜನ್ಯ. ವೆನೆಜುವೆಲಾ ದೇಶದ ಮೇಲೆ ನಡೆದಿರುವ ದಾಳಿ ಪ್ರಪಂಚದ ಎಲ್ಲ ಸಾರ್ವಭೌಮ ದೇಶಗಳ ಮೇಲಿನ ಆಕ್ರಮಣವಾಗಿದೆ.
ಕೂಡಲೇ ವೆನೆಜುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೆರಿಕಾವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೆರಿಕಾದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.