ಯಲಬುರ್ಗಾದಲ್ಲಿ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಿರಸ್ತೇದಾರ್ ದೇವರಡ್ಡಿ, ಸಿಪಿಐ ಮೌನೇಶ್ವರ ಪಾಟೀಲ್‌ಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಬಸವರಾಜ ಭಜಂತ್ರಿ, ಕರಾವೇ ತಾಲೂಕು ಅಧ್ಯಕ್ಷ ರಾಜಶೇಖರ ಶ್ಯಾಗೋಟಿ, ಶಿವು ರಾಜೂರ, ಎಸ್.ಕೆ. ದಾನಕೈ, ರೇವಣೆಪ್ಪ ಹಿರೇಕುರುಬರ, ನೀಲನಗೌಡ ತಳುವಗೇರಿ ಇತರರಿದ್ದರು.
ಯಲಬುರ್ಗಾ: ಕುರಿಗಾಹಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಬೀರಲಿಂಗೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ದೇವರಡ್ಡಿ, ಸಿಪಿಐ ಮೌನೇಶ್ವರ ಪಾಟೀಲ್‌ಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿ, ತಾಲೂಕಿನ ನಾನಾ ಗ್ರಾಮಗಳಲ್ಲಿ ಕುರಿ ಹಾಗೂ ಜಾನುವಾರುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುರಿಗಾರರಿಗೆ ಯಾವುದೇ ರಕ್ಷಣೆ ಇಲ್ಲದೇ ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ. ದಾಖಲೆ ಸಮೇತ ಕಳ್ಳರ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯ ಪೊಲೀಸರ ಅಸಹಾಯಕ ಸ್ಥಿತಿಯನ್ನು ಕುರಿ ಕಳ್ಳರು ವರದಾನವಾಗಿ ಮಾಡಿಕೊಂಡಿದ್ದಾರೆ. ಕಳ್ಳತನ ಸಮಯದಲ್ಲಿ ಕುರಿಗಾರರ ಮೇಲೆ ಮಾರಕಾಸ್ತಗಳಿಂದ ಹಲ್ಲೆ ಮಾಡಲು ಮುಂದಾಗುತ್ತಾರೆ ಎಂದರು.
ಕರಾವೇ (ನಾರಾಯಣ ಗೌಡ) ತಾಲೂಕು ಅಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ, ಕುರಿ ಸಾಕಣೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಕುರಿಗಾರರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕುರಿ ಸಾಗಣೆ ಮಾಡಲು ಕಳ್ಳರು ತಂದ ವಾಹನವನ್ನು ಠಾಣೆಗೆ ಒಪ್ಪಿಸಿದರೂ ಕಳ್ಳರನ್ನು ಪತ್ತೆ ಮಾಡುವಲ್ಲಿ ನಿರ್ಲಕ್ಷೃ ವಹಿಸಿದ್ದಾರೆ. ಕಳ್ಳರನ್ನು ವಾರದಲ್ಲಿ ಬಂಧಿಸುವುದಕ್ಕೆ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಕುರಿಗಾರರ ಕುಟುಂಬಗಳು ಹಾಗೂ ಕುರಿಗಳ ಸಮೇತ ತಹಸಿಲ್ ಕಚೇರಿ ಮುಂದೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದ ಕನಕದಾಸ ವೃತ್ತದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೂ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಸಿದ್ದಪ್ಪ ಬಂಡಿಹಾಳ, ಮಂಜುನಾಥ್ ರಾಥೋಡ್, ನಾಗಪ್ಪ ಹುಂಡಿ, ಪಂಪಣ್ಣ ಕುಡಗುಂಟಿ, ದೇವಪ್ಪ ಪರಂಗಿ, ಸಿದ್ದಪ್ಪ ಹಿರೇಕುರುಬರ, ದೊಡ್ಡಯ್ಯ ಗುರುವಿನ, ಶೇಖರ ಗುರಾಣಿ ಇತರರಿದ್ದರು.