ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಸಮಿತಿ ಜಿಲ್ಲಾಧ್ಯಕ್ಷ ಎ.ಹುಲುಗಪ್ಪ, ಸಂಚಾಲಕ ಎ.ಎಲ್.ತಿಮ್ಮಣ್ಣ, ಪದಾಧಿಕಾರಿಗಳಾದ ಮಂಜುನಾಥ, ಲಕ್ಷ್ಮಣ ನಾಯಕ ಕಾರಟಗಿ, ಶೇಖಮ್ಮ, ಗಂಗಮ್ಮ ಇತರರಿದ್ದರು.
ಗಂಗಾವತಿ: ವಿದ್ಯುತ್‌ಕ್ಷೇತ್ರ ಖಾಸಗೀಕರಣ ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರ ಮತ್ತು ಗ್ರಾಮೀಣ ಭಾಗದಿಂದ ಬಂದಿದ್ದ ರೈತರೊಂದಿಗೆ ಪ್ರತಿಭಟನೆ ನಡೆಸಿದ ಸದಸ್ಯರು, ಬೇಡಿಕೆ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಎ.ಹುಲುಗಪ್ಪ ಮತ್ತು ಸಂಚಾಲಕ ಎ.ಎಲ್.ತಿಮ್ಮಣ್ಣ ಮಾತನಾಡಿ, ವಿದ್ಯುತ್ ವಿತರಣೆ ಕ್ಷೇತ್ರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಜನರ ಆಸ್ತಿಯನ್ನು ಖಾಸಗಿ ಕಂಪನಿಗೆ ವಹಿಸುವುದು ಸರಿಯಲ್ಲ.
ವಿತರಣೆ ಜಾಲ ಹೊಂದಿರುವ ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಗ್ರಾಹಕರು ಮತ್ತು ರೈತರಿಗೆ ತೊಂದರೆಯಾಗಲಿದ್ದು, ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಖಾಸಗೀಕರಣ ಮೊದಲು ಗ್ರಾಹಕರು, ರೈತ ಮತ್ತು ಕಾರ್ಮಿಕ ಸಂಘಟನೆಗಳ ಅಭಿಪ್ರಾಯ ಕಡ್ಡಾಯವಾಗಿ ಪಡೆಯಬೇಕು. ಖಾಸಗೀಕರಣದಿಂದ ಉಂಟಾಗುವ ದೀರ್ಘ ಕಾಲಿನ ಪರಿಣಾಮಗಳ ಕುರಿತು ಸಾರ್ವಜನಿಕ ವಿಚಾರಣೆ ನಡೆಯಬೇಕಿದ್ದು, ಖಾಸಗೀಕರಣದ ಅರ್ಜಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿದರು.