ಕೃಷಿ ಆಧಾರಿತ ಕೈಗಾರಿಕೆ ಸ್ಥಾಪನೆಯಾಗಲಿ

ಹಿರೇಮನ್ನಾಪೂರ ಗ್ರಾಮದಲ್ಲಿ ಜರುಗಿದ ಸಮ್ಮೇಳನದಲ್ಲಿ ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷರಾದ ಬಸವರಾಜ ಸಬರದ, ಎಸ್.ವಿ. ಪಾಟೀಲ ಗುಂಡೂರು, ಡಾ.ಕೆ.ಬಿ. ಬ್ಯಾಳಿ ಅವರನ್ನು ಸನ್ಮಾನಿಸಲಾಯಿತು.
ಹಿರೇಮನ್ನಾಪೂರ ಗ್ರಾಮದಲ್ಲಿ ಜರುಗಿದ ಸಮ್ಮೇಳನದಲ್ಲಿ ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷರಾದ ಬಸವರಾಜ ಸಬರದ, ಎಸ್.ವಿ. ಪಾಟೀಲ ಗುಂಡೂರು, ಡಾ.ಕೆ.ಬಿ. ಬ್ಯಾಳಿ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಹೇಳಿಕೆ
  • ಕೊಪ್ಪಳ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ
  • ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅಭಿಮತ
ಕುಷ್ಟಗಿ: ಸಾಹಿತಿಗಳು ಗಂಭೀರವಾದ ಚಿಂತನೆಗಳನ್ನು ಸಮ್ಮೇಳನದಲ್ಲಿ ಹಂಚಿಕೊಂಡಿದ್ದಾರೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಪ್ರಶ್ನೆಗೆ ಉತ್ತರಿಸಿದರು.
ಹಿರೇಮನ್ನಾಪೂರದಲ್ಲಿ ನಡೆದ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಸಮ್ಮೇಳನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಬಹಳಷ್ಟು ಸಾಹಿತಿಗಳು ಮಾಡಿದ್ದಾರೆ. ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ, ಜನರ ಮನ ಪರಿವರ್ತನೆ ಮಾಡುವ ಕೆಲಸವನ್ನು ಅನೇಕ ಕವಿಗಳು ಕವಿಗೋಷ್ಠಿಯಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಸಿದ್ದು ಯಾಪಲಪರ್ವಿ ಮಾತನಾಡಿ, ಇತ್ತೀಚೆಗೆ ಸಮ್ಮೇಳನಗಳು ಮಹತ್ವ ಕಳೆದುಕೊಳ್ಳುತ್ತಿವೆ. ಮೆರವಣಿಗೆ ಹೊರತು ಇತರ ಕಾರ್ಯಕ್ರಮಗಳಿಗೆ ಜನ ಇರುವುದಿಲ್ಲ. ಬರಹಗಾರರು, ಸಾಹಿತಿಗಳ ಮಾತನ್ನು ಸರ್ಕಾರಗಳು ಕೇಳಲ್ಲ. ಸಾಹಿತ್ಯ ಪರಿಷತ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ರಾಜಕಾಣಿಗಳಿಗಾಗಿ ಕಾದು ಸಮ್ಮೇಳನ ಆರಂಭಿಸುತ್ತಿರುವುದು ವಿಪರ್ಯಾಸ. ಪರಿಸರ, ಕೃಷಿ, ಶಿಕ್ಷಣ ಸೇರಿ ಸಮಾಜಪರ ಸಾಹಿತ್ಯ ಬರಬೇಕು. ಬರಹಗಾರರು ಮುಕ್ತವಾಗಿ ಎಲ್ಲವನ್ನು, ಎಲ್ಲರನ್ನೂ ಪ್ರಶ್ನೆ ಮಾಡಿ ಬರೆಯಬೇಕು. ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳನ್ನು ನಂಬಿ ಕಸಾಪ ಚುನಾವಣೆಗೆ ನಿಲ್ಲಬಾರದು. ಬರಹಗಾರರು ಹಾಗೂ ಮಾಧ್ಯಮಗಳು ಸ್ವಂತಿಕೆ ಕಳೆದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ ಮಾತನಾಡಿ, ಕೃಷ್ಣ ಬಿ ಸ್ಕೀಂ ಸಂಪೂರ್ಣ ಅನುಷ್ಠಾನ ಮಾಡಬೇಕು. ಈ ಯೋಜನೆ ಕೆರೆ ತುಂಬಿಸಲು ಸೀಮಿತಗೊಳಿಸದೇ ರೈತರ ಜಮೀನುಗಳಿಗೆ ನೀರು ತಲುಪಿಸಬೇಕು. ಸಮಾಜದ ಕಷ್ಟಗಳನ್ನು ಸಾಹಿತಿಗಳು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು. ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸಬೇಕು. ಗುಳೆ ತಡೆಯಲು ಸ್ಥಳೀಯರಿಗೆ ಕೆಲಸ ನೀಡಬೇಕು. ಗ್ರಾಮಗಳನ್ನು ಅಪರಾಧಮುಕ್ತ ಮಾಡಬೇಕು. ನೊಂದವರಿಗೆ ನ್ಯಾಯ ಸಿಗುವ ಕೆಲಸವಾಗಬೇಕು ಎಂದರು.ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಎರಡು ದಿನ ಸಮ್ಮೇಳನ ಯಶಸ್ವಿಯಾಗಿ ಜರುಗಿದೆ. ಕನ್ನಡಿಗರ ಸಹಕಾರದಿಂದ ಸಾಹಿತ್ಯಿಕ ಕಾರ್ಯಕ್ರಮಗಳು ರಾಜ್ಯದಲ್ಲಿ ಜರುಗುತ್ತಿವೆ ಎಂದರು.
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದಪ್ಪ ಗುಡಿಮನಿ, ಕಸಾಪ ತಾಲೂಕಾಧ್ಯಕ್ಷ ಲೆಂಕೆಪ್ಪ ವಾಲೀಕಾರ, ಹೋಬಳಿ ಅಧ್ಯಕ್ಷರಾದ ಶಿವಾನಂದ ಹಿರೇಮಠ, ಮಂಜುನಾಥ ಗುಳೇದಗುಡ್ಡ ಇತರರಿದ್ದರು.

ಊಟದ ವ್ಯವಸ್ಥೆ ಅಚ್ಚುಕಟ್ಟು

ಸಮ್ಮೇಳನದ ಎರಡನೇ ದಿನ ಭಾನುವಾರ ಬಂದವರಿಗೆ ಊಟ ಬಡಿಸುವ ವ್ಯವಸ್ಥೆಯನ್ನು ಹಿರೇಮನ್ನಾಪೂರ ಗ್ರಾಮಸ್ಥರು ಅಚ್ಚುಕಟ್ಟಾಗಿ ಮಾಡಿದರು. ಬೆಳಗ್ಗೆ ಉಪಹಾರಕ್ಕೆ ಅವಲಕ್ಕಿ, ಮಧ್ಯಾಹ್ನ ಊಟಕ್ಕೆ ಬದನೆಕಾಯಿ ಪಲ್ಯ, ಗೋಧಿ ಹುಗ್ಗಿ, ಹಪ್ಪಳ, ಅನ್ನ ಸಾಂಬರ್ ವ್ಯವಸ್ಥೆ ಮಾಡಲಾಗಿತ್ತು.
===============

ಸಾಹಿತ್ಯ ಕ್ಷೇತ್ರಕ್ಕೆ ರಾಜಕೀಯ ಪ್ರವೇಶ ಸಲ್ಲ

ಶೇಖರಗೌಡ ಮಾಲಿಪಾಟೀಲ್ ಅಭಿಮತ 
 ಸರ್ವಾಧ್ಯಕ್ಷರೊಂದಿಗೆ ಸಾಹಿತಿಗಳ ಸಂವಾ
ಕುಷ್ಟಗಿ: ಸಾಹಿತ್ಯ ಹಾಗೂ ಸಹಕಾರ ಕ್ಷೇತ್ರ ಬಹಳ ಪವಿತ್ರವಾದವು. ನಾನು ಈ ಎರಡೂ ಕ್ಷೇತ್ರಗಳಲ್ಲಿ ಮುಂದುವರಿಯಲು ಬಯಸುವೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.
ಹಿರೇಮನ್ನಾಪೂರದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಈ ರೀತಿ ಉತ್ತರಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಬೆರೆಸುವ ಕೆಲಸ ಆಗಬಾರದು. ರಾಜಕಾರಣದಲ್ಲಿ ತಾವು ಯಾವುದೇ ಹುದ್ದೆ ಅಲಂಕರಿಸಿಲ್ಲ. ರಾಜಕಾರಣ ಕ್ಷಣಿಕ. ಮುಂಬರುವ ದಿನಗಳಲ್ಲಿ ಹನುಮಸಾಗರ ಹಾಗೂ ತಾವರಗೇರಾ ಪಟ್ಟಣದಲ್ಲಿ ಪದವಿ ವಿಜ್ಞಾನ ಕಾಲೇಜು ಮಂಜೂರಾತಿ ಹಾಗೂ ಗದಗ, ಗಜೇಂದ್ರಗಡ, ಹನುಮಸಾಗರ ಮೂಲಕ ವಿಜಯಪುರಕ್ಕೆ ರೈಲು ಪ್ರಾರಂಭ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಮಾಡಿದ ಖರ್ಚಿಗಿಂತ ಹೆಚ್ಚು ಹಣದ ಬೇಡಿಕೆಯನ್ನು ಸರ್ಕಾರದ ಮುಂದೆ ಕಸಾಪದವರು ಕೇಳುತ್ತಾರೆ. ಇದು ತಪ್ಪು. ದುಂದುವೆಚ್ಚ ಕಡಿಮೆ ಮಾಡಿ ಸಮ್ಮೇಳನ ಮಾಡಬೇಕು ಎಂದರು.
ಕಸಾಪ ತಾಲೂಕು ಮಾಜಿ ಅಧ್ಯಕ್ಷ ಚಂದಪ್ಪ ಹಕ್ಕಿ, ಸಾಹಿತಿ ಎಂ.ಡಿ. ನಂದವಾಡಗಿ, ಮಾಲಾ ಶ್ರೀಧರ, ಡಾ. ನಾಗರಾಜ ಪೂಜಾರ, ವಿದ್ಯಾ ಕಂಪಾಪೂರಮಠ ಸಮ್ಮೇಳನ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಸಿದರು. ಹಿಂದಿನ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಬಸವರಾಜ ಸಬರದ, ಎಸ್.ವಿ. ಪಾಟೀಲ ಗುಂಡೂರು, ಡಾ.ಕೆ.ಬಿ. ಬ್ಯಾಳಿ ಉಪಸ್ಥಿತರಿದ್ದರು.
"

ಸಿಟ್ಟು ಬಿಟ್ಟು ಸಹನೆಯಿಂದ ಬಾಳಿದರೆ ಸಾಧನೆ ಸಾಧ್ಯ. ಭಾವನೆಗಳು ಹೃದಯ ದಿಂದ ಬರಲು ನೈಜತೆ ಕಾಣಬೇಕು. ಯುವ ಪೀಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.

— ಎಸ್.ವಿ. ಪಾಟೀಲ ಗುಂಡೂರು 7ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ

ತಾಂತ್ರಿಕ ಶಿಕ್ಷಣದಿಂದಾಗಿ ಮಕ್ಕಳು ಹದಗೆಡುತ್ತಿದ್ದಾರೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಮಾನವೀಯ ಮೌಲ್ಯ ಬಿತ್ತಬೇಕಿದೆ.

— ಡಾ.ಕೆ.ಬಿ.ಬ್ಯಾಳಿ 8ನೇ ಜಿಲ್ಲಾ ಸಮ್ಮೇಳನ ಸರ್ವಾಧ್ಯಕ್ಷ

===========================================================

ಧಾರ್ಮಿಕ ಹಿತಕ್ಕೆ ಸೌಹಾರ್ದತೆ ಬಲಿ

ಕುಷ್ಟಗಿ: ರಾಜಕೀಯ ಹಾಗೂ ಧಾರ್ಮಿಕ ಹಿತಾಸಕ್ತಿಗಳು ಜನರ ಕೋಮು ಸೌಹಾರ್ದತೆ ಕೆಡಿಸುತ್ತಿವೆ ಎಂದು ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ ಕೆ.ಆರ್. ಹೇಳಿದರು.
ಸಮ್ಮೇಳನದಲ್ಲಿ ಬಯಲಾಟ ಅಕಾಡೆಮಿ ಅಧ್ಯಕ್ಷ ದುರ್ಗಾದಾಸ ಕೆ.ಆರ್. ಮಾತನಾಡಿದರು.

ಲ್ಲಾ ಸಮ್ಮೇಳನದಲ್ಲಿ ನೆಲಮೂಲ ಸಂಸ್ಕೃತಿ, ಬಯಲಾಟ ಪರಂಪರೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತ ಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಸಮ್ಮಿಶ್ರವಾಗಿರುವ ಭಾರತೀಯ ಸಂಸ್ಕೃತಿ ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ. ವಸ್ತುನಿಷ್ಠ ಅಂಶ ಇಟ್ಟುಕೊಂಡು ಜನರಿಗೆ ಮನವರಿಕೆ ಮಾಡಿಕೊಡುವಂತಹ ಕೆಲಸ ಆಗಬೇಕು. ಆಗ ಮಾತ್ರ ಜನರ ಮನ ತಲುಪಲು ಸಾಧ್ಯ. ಸಂಸ್ಕೃತಿಯ ಪ್ರಚಾರದಲ್ಲಿ ಎಲ್ಲರೂ ಭಾಗವಹಿಸುವಂತೆ ಮಾಡಬೇಕು ಎಂದರು.
ತುಮಕೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ಖಂಡಿಮಠ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸಂಪನ್ಮೂಲ, ಬುದ್ಧಿವಂತಿಕೆ ಇದ್ದರೂ ಹಿಂದೆ ಉಳಿದಿದ್ದು ವಿಷಾದನೀಯ. ಜಾತಿ ಹಾಗೂ ಶ್ರೀಮಂತಿಕೆ ಮೀರಿ ಒಂದಾಗಿ ಬಾಳಬೇಕು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕಾರ್ಯವಾಗಬೇಕು. ಸಾಹಿತಿಗಳು ಬದುಕಿನ ಮೌಲ್ಯಗಳನ್ನು ಜೀವಂತವಾಗಿ ಹಿಡಿದಿಡುವ ಕೆಲಸ ಮಾಡಬೇಕು ಎಂದರು.
ಕಕ ಸಂರಕ್ಷಣಾ ರಾಜ್ಯ ಸಂಚಾಲಕ ಶರಣಪ್ಪ ಜಡಿ ಅಳವಂಡಿ ಮಾತನಾಡಿ, ನಮ್ಮ ಭಾಗದ ಅನುದಾನ ಇನ್ನೊಬ್ಬರ ಪಾಲಾಗುತ್ತಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಹೊರಗಿನವರು 371(ಜೆ) ಲಾಭ ಪಡೆಯುವುದು ನಿಲ್ಲದು ಎಂದರು. ಬೇರೆ ಭಾಗದ ಅಧಿಕಾರಿಗಳು ಇಲ್ಲಿ ಇರುವುದರಿಂದ ನಮಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ನಮ್ಮ ಜನಪ್ರತಿನಿಧಿಗಳು ಈ ಭಾಗದ ಸಮಸ್ಯೆಗಳ ಬಗ್ಗೆ ಕಲಾಪಗಳಲ್ಲಿ ಮಾತನಾಡುತ್ತಿಲ್ಲ. ಇದರಿಂದಾಗಿ ನಾವು ಈಗಲೂ ಹಿಂದೆ ಉಳಿದಿದ್ದೇವೆ ಎಂದರು. ಶಿಕ್ಷಕ ಶ್ಯಾಮಿದಲಿ ಮದ್ಗಾರ ಮಾತನಾಡಿದರು.
=======================================================================

ಕವಿತೆ ನೊಂದವರ ದನಿಯಾಗಲಿ

ಕುಷ್ಟಗಿ: ಕವಿತೆಗಳು ಕತ್ತಲಿಗೆ ಬೆಳಕಾಗಿ, ಹೋರಾಟಗಾರರಿಗೆ, ನೊಂದವರಿಗೆ ದನಿಯಾಗಬೇಕು ಎಂದು ಸಾಹಿತಿ ಅರುಣಾ ನರೇಂದ್ರ ಹೇಳಿದರು. ಹಿರೇಮನ್ನಾಪೂರದಲ್ಲಿ ಜಿಲ್ಲಾ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಕವಿತೆ ಮನುಷ್ಯನಿಗೆ ಬೆಳಕು ನೀಡುವ ದೀಪ ಆಗಬೇಕು. ಸಾಮರಸ್ಯದ ಬದುಕು, ಸಾಮಾಜಿಕ ಪ್ರಗತಿ ಸಾರುವ ಕವಿತೆ ಬರುತ್ತಿಲ್ಲ. ನಿತ್ಯ ಮಾನವೀಯತೆ ಹರಣವಾಗುತ್ತಿದೆ ಎಂದರು.
ಸಮ್ಮೇಳನ ಕವಿಗೋಷ್ಠಿಯಲ್ಲಿ ಸಾಹಿತಿ ಅರುಣಾ ನರೇಂದ್ರ ಮಾತನಾಡಿದರು.

ಕವಯಿತ್ರಿ ಡಾ. ಮುಮ್ತಾಜ್ ಬೇಗಂ ಮಾತನಾಡಿ, ಅಧ್ಯಯನ ಮಾಡಿ ರಚಿಸಿದರೆ ಮಾತ್ರ ಗಟ್ಟಿ ಕಾವ್ಯ ರಚನೆ ಸಾಧ್ಯ. ಜ್ಞಾನಸ್ಥ ಸ್ಥಿತಿ ಮೂಲಕ ಕವಿತೆ ರಚನೆ ಆಗಬೇಕು. ಸಮಾಜಮುಖಿ ಹಾಗೂ ಆತ್ಮದ ಒಳ ಅವಲೋಕನದ ಕವಿತೆ ಬರಬೇಕು. ಕವಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
33ಕ್ಕೂ ಹೆಚ್ಚು ಕವಿಗಳು ವಿವಿಧ ವಿಷಯಗಳ ಮೇಲೆ ರಚಿಸಿದ ಕವನ ವಾಚಿಸಿ ಗಮನಸೆಳೆದರು. ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲೂಕಾಧ್ಯಕ್ಷ ಲೆಂಕೆಪ್ಪ ವಾಲೀಕಾರ, ಹನುಮಂತಪ್ಪ ಛಲವಾದಿ, ಸಾಹಿತಿಗಳಾದ ಹ.ಯ. ಈಟಿಯವರ, ಶೇಖರಗೌಡ ಸರನಾಡಗೌಡರ, ಆರ್.ಕೆ. ಸುಬೇದಾರ, ಡಾ. ಶರಣಪ್ಪ ದೋಟಿಹಾಳ, ಶರಣಪ್ಪ ಮೆಟ್ರಿ ಇತರರಿದ್ದರು.
ಹಿರೇಮನ್ನಾಪೂರದಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಭಾನುವಾರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಕಸಾಪ ಜಿಲ್ಲಾ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ತಾಲೂಕಾಧ್ಯಕ್ಷ ಲಂಕೆಪ್ಪ ವಾಲೀಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net