ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಡು, ನುಡಿ ಚಿಂತನೆ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಸಸಿ ನೆಡುವ ಮೂಲಕ ಗುರುವಾರ ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ, ಸಿಎಂಎನ್ ಕಾಲೇಜಿನ ಉಪನ್ಯಾಸಕ ಡಾ. ಹನುಮಂತಪ್ಪ ಚಂದಲಾಪುರ ಇತರರಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಅಭಿಮತ
ಕನ್ನಡ ನಾಡು, ನುಡಿ ಚಿಂತನೆ ಕುರಿತ ಉಪನ್ಯಾಸ ಕಾರ್ಯಕ್ರಮ
ಗಂಗಾವತಿ: ಸಾಹಿತ್ಯ ಪ್ರಕಾರಗಳು ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದು, ಪ್ರಸಿದ್ಧ ಲೇಖಕರ ಸಾಹಿತ್ಯ ಕನ್ನಡವನ್ನು ಭಾಷೆಯನ್ನು ಜೀವಂತವಾಗಿಡುತ್ತಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ್ ನಂದಾಪುರ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಕೋರ ಸಾಹಿತ್ಯ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ನಾಡು, ನುಡಿ ಚಿಂತನೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಇಲ್ಲಿನ ಸಾಹಿತ್ಯಗಳು ಜಾಗತಿಕಮಟ್ಟದಲ್ಲೂ ಹೆಸರು ಮಾಡಿವೆ. ಪ್ರಮುಖ ಸಾಹಿತಿಗಳ ಸಾಹಿತ್ಯಗಳು ಸಮಾಜ ಪರಿವರ್ತನೆಗೆ ಪೂರಕವಾಗಿವೆ ಎಂದರು.
ಸಿಎಂಎನ್ ಕಾಲೇಜಿನ ಉಪನ್ಯಾಸಕ ಡಾ. ಹನುಮಂತಪ್ಪ ಚಂದಲಾಪುರ ಮಾತನಾಡಿ, ಕನ್ನಡ ನಾಡಿನ ಪರಂಪರೆ ಮತ್ತು ಪ್ರಾದೇಶಿಕ ಸಾಹಿತ್ಯ ಶ್ರೀಮಂತಿಕೆಯ ಹೆಜ್ಜೆಗುರುತುಗಳಾಗಿದ್ದು, ಬದುಕನ್ನು ಪ್ರಭಾವಿಸಿದ ಸಾಹಿತ್ಯ ಭಾಷೆಯ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಆಧುನಿಕ ಕಾಲ ಘಟ್ಟದಲ್ಲಿ ಜಾಗತೀಕರಣದ ಪ್ರಭಾವದಿಂದ ಕನ್ನಡಕ್ಕೆ ಧಕ್ಕೆ ಬರದಂತೆ ಜಾಗ್ರತೆ ವಹಿಸಬೇಕಿದ್ದು, ಭಾಷಾ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫಿ, ಪ್ರಾಧ್ಯಾಪಕರಾದ ಕೆ.ವಿರೂಪಾಕ್ಷ, ಡಾ.ಸರರಾಜ್ ಅಹ್ಮದ್, ಡಾ.ಶಶಿಕುಮಾರ, ಎಂ. ಶಂಕ್ರಪ್ಪ, ರವಿಕುಮಾರ, ಉಪನ್ಯಾಸಕ ಈಶಪ್ಪ ಮೇಟಿ, ಸಿಬ್ಬಂದಿ ರಾಧಾ, ಜಬೀನಾಬೇಗಂ, ವಿನಾಯಕ, ಶಾಂತಿ, ಚಿನ್ನವರಪ್ರಸಾದ, ಶರಣಬಸವ ಇತರರಿದ್ದರು.