ತಾಲೂಕಿನ ಅಳವಂಡಿಯ ಪಿಎಸ್ಐ ಪ್ರಹ್ಲಾದ ನಾಯಕ್ ಗುಂಡಾ ವರ್ತನೆ ಖಂಡಿಸಿ ಕೊಪ್ಪಳ ಕಾನೂನು ವಿದ್ಯಾರ್ಥಿಗಳು ಎಸ್ಪಿ ಕಚೇರಿಯ ಸಿಪಿಐ ಈರಣ್ಣ ಹಳ್ಳಿ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಸರ್ವಜ್ಞ, ಸೈಯದ್ ಆಸಿಫ್, ಯಲ್ಲಪ್ಪ ಮೇಟಿ, ಬಸವರಾಜ, ರವಿ ಆಗೋಲಿ, ಶರಣು, ಅಣ್ಣಪ್ಪ, ಬಾಲಜಿ ಇದ್ದರು.
ಕೊಪ್ಪಳ : ತಾಲೂಕಿನ ಅಳವಂಡಿ ಪೊಲೀಸ್ ಠಾಣೆ ಪಿಎಸ್ಐ ಪ್ರಹ್ಲಾದ ನಾಯಕ್ ವರ್ತನೆ ಖಂಡಿಸಿ ಕೊಪ್ಪಳದ ಕಾನೂನು ವಿದ್ಯಾರ್ಥಿಗಳು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ನ್ಯಾಯಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾನೂನು ವಿದ್ಯಾರ್ಥಿ ಯಲ್ಲಪ್ಪ ಮೇಟಿ ಮಾತನಾಡಿ, ತಾವು ಹಾಗೂ ತಮ್ಮ ಸಹಪಾಠಿ ಬಸವರಾಜ ಬಂಡಿ ಜೂನ್ 14ರಂದು ರಾತ್ರಿ 8ಕ್ಕೆ ಸಿವಿಲ್ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಸ್ನೇಹಿತ ಮರಿಯಪ್ಪನನ್ನು ಠಾಣೆಗೆ ಕರೆತಂದಿರುವ ಕಾರಣವನ್ನು ವಿಚಾರಿಸಲು ಅಳವಂಡಿ ಪೊಲೀಸ್ ಠಾಣೆಗೆ ತೆರಳಿದ್ದಾಗ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ತಮ್ಮೊಂದಿಗೆ ಅವಾಚ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಘಟನೆಯ ವಿಡಿಯೋ ತಗೆಯಲು ಮುಂದಾದಾಗ, ಪಿಎಸ್ಐ ಹಾಗೂ ಕೆಲ ಸಿಬ್ಬಂದಿ ನಮ್ಮನ್ನು ಠಾಣೆಯೊಳಗೆ ಎಳೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ಬಳಿಕ ನಮ್ಮ ಮೊಬೈಲ್ನಲ್ಲಿದ್ದ ವಿಡಿಯೋ ಡಿಲಿಟ್ ಮಾಡಿದ್ದಾರೆ ಎಂದು ಅವರು ದೂರಿದರು.
ವಿದ್ಯಾರ್ಥಿಗಳು ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಪಿ ಕಚೇರಿಯ ಸಿಪಿಐ ಈರಣ್ಣ ಹಳ್ಳಿ ಅವರಿಗೆ ಮನವಿ ಸಲ್ಲಿಸಿ. ಸೂಕ್ತ ಕ್ರಮ ಕೈಗೊಳ್ಳಲು ವಿಳಂಬವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಕೊಪ್ಪಳ ಕಾನೂನು ವಿದ್ಯಾರ್ಥಿಗಳಾದ ಸರ್ವಜ್ಞ, ಸೈಯದ್ ಆಸಿಫ್, ಯಲ್ಲಪ್ಪ ಮೇಟಿ, ಬಸವರಾಜ, ರವಿ ಆಗೋಲಿ, ಶರಣು, ಅಣ್ಣಪ್ಪ, ಬಾಲಜಿ ಇತರರಿದ್ದರು.