ಕೊಪ್ಪಳ: ಬರ ಘೋಷಣೆಯಲ್ಲಿ ಕೊಪ್ಪಳಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಕಾರ್ಯಕರ್ತರು ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೊಪ್ಪಳ ತಾಲೂಕು ಸೇರಿ ಕುಷ್ಟಗಿ, ಯಲಬುರ್ಗಾದಲ್ಲಿ ತೀವ್ರ ಬರ ಇದೆ. ಮಳೆ ಇಲ್ಲದೇ ಜನರು ಸಂಕಷ್ಟದಲ್ಲಿದ್ದಾರೆ. ಬಿತ್ತಿದ ಬೆಳೆ ಬಂದಿಲ್ಲ. ಜನ&ಜಾನುವಾರು ಸಂಕಷ್ಟ ಎದುರಿಸುವಂತಾಗಿದೆ. ಹೀಗಿದ್ದರೂ ಬರ ಪೀಡಿತ ತಾಲೂಕುಗಳಲ್ಲಿ ಕೊಪ್ಪಳ ಸೇರಿಸಿಲ್ಲ. ಈ ಮೂಲಕ ಜಿಲ್ಲೆಯ ರೈತರಿಗೆ ಸರ್ಕಾರ ತೀವ್ರ ಅನ್ಯಾಯ ಮಾಡಿದೆ. ಜಿಲ್ಲೆಯ ಇಬ್ಬರು ಸಚಿವರು, ಶಾಸಕ, ಸಂಸದರು ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಸರ್ಕಾರಕ್ಕೆ ಸಮಸ್ಯೆ ಮನವರಿಕೆ ಮಾಡಿಕೊಟ್ಟಿಲ್ಲ. ಈ ಮೂಲಕ ರೈತ ವಿರೋಧಿ ನಡೆ ಅನುಸರಿಸಿದ್ದಾರೆ. ಸರ್ಕಾರವೂ ಕೊಪ್ಪಳ ಜನತೆಗೆ ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದರು.
ರೈತರು ಮಳೆ ಇಲ್ಲದೇ ಕಂಗಾಲಾಗಿದ್ದಾರೆ. ಬಿತ್ತಿದ ಬೀಜ ಮೊಳಕೆ ಒಡೆದಿಲ್ಲ. ಬೆಳೆ ಒಣಗಿವೆ. ಕುಡಿವ ನೀರಿಗೂ ಸಮಸ್ಯೆ ಆಗಿದೆ. ಬಿತ್ತೆನೆಗೆ ಮಾಡಿದ ಖರ್ಚು ನಷ್ಟವಾಗಿದೆ. ಹಿಂಗಾರು ಮಳೆಯೂ ಬರುವ ಲಕ್ಷಣ ದಟ್ಟವಾಗಿಲ್ಲ. ಅಧಿಕಾರಿಗಳ ಸಭೆಗೆ ಶಾಸಕ ರಾವೇಂದ್ರ ಹಿಟ್ನಾಳ ಹೋಗುವ ಬದಲು ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಕುಳಿತಿದ್ದರು. ಇವರಿಗೆ ರೈತರು, ಜನಪರ ಕಾಳಜಿ ಕಿಂಚಿತ್ತಾದರೂ ಇದೆಯಾ ಎಂದು ಕುಟುಕಿದರು.
ತಕ್ಷಣ ಸರ್ಕಾರ ಕೊಪ್ಪಳ ತಾಲೂಕು ಬರ ಪೀಡಿತ ಪಟ್ಟಿಗೆ ಸೇರಿಸಬೇಕು. ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.