ಕೊಪ್ಪಳ ಸರ್ಕಾರಿ ಕಚೇರಿಗಳ ಆವರಣ ಕಸದ ತಾಣ

ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಬಾಗದ ಕಸದಿಂದ ತುಂಬಿದ ಉದ್ಯಾನ.
ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಬಾಗದ ಕಸದಿಂದ ತುಂಬಿದ ಉದ್ಯಾನ.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತೆ ಶಿಕ್ಷಣ ಮರೆತ ಶಿಕ್ಷಣ ಇಲಾಖೆ
  • ಕಸದ ಮದ್ಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್​
ಕೊಪ್ಪಳ : ಜನರಿಗೆ ಮಾದರಿಯಾಗಬೇಕಾದ ಸರ್ಕಾರಿ ಕಚೇರಿಗಳೇ ಇಂದು ಅಸ್ವಚ್ಛತೆಯ ಕೇಂದ್ರಗಳಾಗಿ ಮಾರ್ಪಟ್ಟಿರುವುದು ಗಂಭೀರ ಸಮಸ್ಯೆಯಾಗಿದೆ. ನಗರದ ತಾಪಂ, ತಹಶೀಲ್ದಾರ್​ ಹಾಗೂ ಇತರೆ ಪ್ರಮುಖ ಕಚೇರಿಗಳಲ್ಲಿ ಕಸದ ರಾಶಿ, ದುರ್ವಾಸನೆ ಮತ್ತು ಶೌಚಗೃಹಗಳ ಕೊರತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಪಂ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಶೌಚಗೃಹ ಸೌಲಭ್ಯಗಳಿಲ್ಲದಂತಾಗಿದೆ. ಕಚೇರಿ ಆವರಣದಲ್ಲಿನ ಹಳೆಯ ಕಟ್ಟಡಗಳನ್ನು ನೌಕರರು ಹಾಗೂ ಸಾರ್ವಜನಿಕರು ಮೂತ್ರಾಲಯಗಳಾಗಿ ಬಳಸುತ್ತಿರುವುದು ಅಸಹ್ಯಕರ ಪರಿಸ್ಥಿತಿಯನ್ನು ನಿರ್ಮಿಸಿದೆ. ಬಳಕೆಯಲ್ಲಿಲ್ಲದ ಕಟ್ಟಡಗಳನ್ನು ತೆರವುಗೊಳಿಸುವ ಬದಲು, ಅವುಗಳನ್ನು ರ್ನಿಲಕ್ಷ್ಯದಿಂದ ಬಿಟ್ಟು ಅಸ್ವಚ್ಛತೆಯ ತಾಣಗಳನ್ನಾಗಿ ಮಾಡಲಾಗಿದೆ.
ತಹಶೀಲ್ದಾರ್​ ಕಚೇರಿಯ ಪರಿಸ್ಥಿತಿ ಇನ್ನೂ ಹೀನಾಯವಾಗಿದೆ. ಕಚೇರಿ ಸುತ್ತಮುತ್ತ ಕಸದ ರಾಶಿ ಮತ್ತು ದುರ್ವಾಸನೆ ಆವರಿಸಿಕೊಂಡಿದೆ. ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುವ ಅಕ್ಕ ಕೆಫೆ ಪಕ್ಕದಲ್ಲೇ ಮೂತ್ರ ವಿಸರ್ಜನೆ ನಡೆಯುತ್ತಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಉಚಿತ ಶೌಚಗೃಹಗಳನ್ನು ನಿರ್ವಹಣೆ ಇಲ್ಲದೆ ಮುಚ್ಚಿರುವುದು, ಹಣ ಪಡೆದು ಬಳಸುವ ಶೌಚಗೃಹಗಳನ್ನು ಮಾತ್ರ ತೆರೆದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಇದೇ ಆವರಣದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂಭಾಗದಲ್ಲೂ ಸ್ವಚ್ಛತೆ ಕಾಣೆಯಾಗಿದೆ. ಪ್ರತಿದಿನ ನೂರಾರು ಜನ ಭೇಟಿ ನೀಡುವ ಸ್ಥಳದಲ್ಲೇ ಶೌಚಗೃಹಗಳನ್ನು ಮುಚ್ಚಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳೂ ಸಹ ಅನಿವಾರ್ಯವಾಗಿ ಕಚೇರಿ ಮೂಲೆಗಳನ್ನು ಬಳಸುವ ಸ್ಥಿತಿ ಉಂಟಾಗಿದೆ.
ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪರಿಸ್ಥಿತಿ ವಿಪರ್ಯಾಸದ ಶಿಖರ ತಲುಪಿದೆ. ಸಮಾಜಕ್ಕೆ ಸ್ವಚ್ಛತೆ ಪಾಠ ಹೇಳಬೇಕಾದ ಈ ಇಲಾಖೆಯೇ ಸ್ವಚ್ಛತೆಯನ್ನು ಸಂಪೂರ್ಣ ಮರೆತಂತಾಗಿದೆ. ಕಚೇರಿ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಭಾರತದ ಶ್ರೇಷ್ಟ ದಾರ್ಶನಿಕ, ಶಿಕ್ಷಕ ಮತ್ತು ಮೊದಲ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್​ ಮೂರ್ತಿಯನ್ನು ಸ್ಥಾಪಿಸಲಾಗಿದ್ದರೂ, ಅದರ ಸುತ್ತಮುತ್ತ ಕಸದ ರಾಶಿ ಕಾಣಿಸುವುದು ಅವಮಾನಕರವಾಗಿದೆ.
ನಗರದ ಪ್ರಮುಖ ಕಚೇರಿಗಳಿಗೆ ದಿನನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿರುವ ಹಿನ್ನೆಲೆ, ಕನಿಷ್ಠ ಸ್ವಚ್ಛತೆ ಮತ್ತು ಶೌಚಗೃಹ ಸೌಲಭ್ಯಗಳನ್ನು ಒದಗಿಸುವುದು ಅತ್ಯಾವಶ್ಯಕವಾಗಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಚೇರಿ ಆವರಣಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
"

ಸರ್ಕಾರಿ ಕಚೇರಿಗಳು ಜನರಿಗೆ ಮಾದರಿಯಾಗಬೇಕು. ಆದರೆ ಇಲ್ಲಿ ಸ್ವಚ್ಛತೆ ಎಂಬುದು ಕಾಣೆಯಾಗಿದೆ. ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಚೇರಿಯಲ್ಲಿ ಉಚಿತ ಶೌಚಗೃಗಳನ್ನು ಮುಚ್ಚಿ ಹಣ ಪಡೆಯು ಶೌಚಗೃಹ ತೆರೆದಿರುವುದರಿಂದ ಜನಗಳು ಕಚೇರಿ ಪಕ್ಕದ ಗೋಡೆ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಎರಡೂ ಶೌಗೃಹಗಳನ್ನು ತೆರೆದರೆ ಇದನ್ನು ತಪ್ಪಿಸಬಹುದು.

— ಹನುಮಂತಪ್ಪ ಕಲಿಕೇರಿ
"

ಸಾರ್ವಜನಿಕರಿಗಾಗಿ ಸುಸಜ್ಜಿತ ಮತ್ತು ಸುಲಭ ಬಳಕೆಯ ಶೌಚಗೃಹಗಳನ್ನು ಸ್ಥಾಪಿಸಲಾಗಿದೆ. ಕೇವಲ 1ರೂ. ಜನರು ಇದರ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಉಚಿತ ಶೌಚಗೃಹಗಳನ್ನು ಮುಚ್ಚಲಾಗಿದೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಾಗಿದ್ದು, ಹೊರಗಡೆ ಮೂತ್ರ ವಿಸರ್ಜನೆ ಮಾಡುವ ಪ್ರವೃತ್ತಿಯನ್ನು ತೊರೆಯಬೇಕು. ಕಚೇರಿ ಸುತ್ತಮುತ್ತಲಿನ ಕಸವನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು.

— ಬಸವರಾಜ ತೇನ್ನಳ್ಳಿ, ತಸೀಲ್ದಾರ ಕೊಪ್ಪಳ.

"

ಡಿ ಗ್ರೂಪ್​ ಸಿಬ್ಬಂದಿ ರಜೆಯಲ್ಲಿರುವುದರಿಂದ ಕಾರ್ಯ ವಿಳಂಬವಾಗಿದೆ. ಬೇಸಿಗೆಯಲ್ಲಿ ಮರಗಳ ಎಲೆಗಳು ಉದುರುವುದರಿಂದ ಹಾಗೂ ಮುಂಭಾಗದಲ್ಲಿರುವ ಹಳೆಯ ಕಟ್ಟಡಗಳ ಕಾರಣ ಪರಿಸರ ಅಸ್ವಚ್ಛವಾಗಿ ಕಾಣುತ್ತದೆ. ಶೀಘ್ರದಲ್ಲೇ ಸಿಬ್ಬಂದಿಗೆ ಸೂಚಿಸಿ ಉದ್ಯಾನ ಮತ್ತು ಕಚೇರಿ ಆವರಣವನ್ನು ಸ್ವಚ್ಛಗೊಳಿಸಲಾಗುತ್ತದೆ.

— ಹನುಮಂತಪ್ಪ ಎಚ್​., ಬಿಇಒ, ಕೊಪ್ಪಳ

ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಬಾಗದ ಕಸದಿಂದ ತುಂಬಿದ ಉದ್ಯಾನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net