ಕೊಪ್ಪಳ ಭ್ರಷ್ಟಾಚಾರ ಮುಕ್ತಗೊಳಿಸಿ

ಕೊಪ್ಪಳದಲ್ಲಿ ಕುಡಾ ಕಚೇರಿಗೆ ಶುಕ್ರವಾರ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರುನ್ನು ಪೊಲೀಸರು ವಶಕ್ಕೆ ಪಡೆದರು.
ಕೊಪ್ಪಳದಲ್ಲಿ ಕುಡಾ ಕಚೇರಿಗೆ ಶುಕ್ರವಾರ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರುನ್ನು ಪೊಲೀಸರು ವಶಕ್ಕೆ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಡಾ ಕಚೇರಿಗೆ ಮುತ್ತಿಗೆ ಯತ್ನ

ಕೊಪ್ಪಳ : ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಕುಡಾ ಕಚೇರಿ ಮುತ್ತಿಗೆಗೆ ಯತ್ನಿಸಿ ಆಕ್ರೋಶ ಹೊರಹಾಕಿದರು.

ಬಡವರು ನಿವೇಶನ ಪಡೆಯಲೆಂದು ಕೂಡಿಟ್ಟು ಕಟ್ಟಿದ ಹಣ ಲಪಟಾಯಿಸಿದ್ದಾರೆ. 8.5 ಕೋಟಿ ರೂ. ಸಾರ್ವಜನಿಕ ಹಣ ಗುಳುಂ ಮಾಡಿದ್ದಾರೆ. ಎಲ್ಲದರಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಶಾಸಕ ರಾವೇಂದ್ರ ಹಿಟ್ನಾಳ ಮೌನವಹಿಸಿದ್ದಾರೆ. ಗುತ್ತಿಗೆ ನೌಕರನೊಬ್ಬ ಇಷ್ಟೊಂದು ಪ್ರಮಾಣದ ಹಣ ಲೂಟಿ ಹೊಡೆದಿದ್ದರೂ ಸರ್ಕಾರ ಕೈ ಕಟ್ಟಿ ಕುಳಿತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳ ಗಮನಕ್ಕೆ ಬಂದಿಲ್ಲವಾ ? ಗಂಗಾವತಿ ಮಹಿಳೆಯೊಬ್ಬರು ದೂರು ನೀಡಿದ ಮೇಲೆ ಹಗರಣ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದರು.
ತಕ್ಷಣ ಆರೋಪಿ ಬಂಧಿಸಬೇಕು. ಹಗರಣದಲ್ಲಿ ಭಾಗಿಯಾದವರ ಬಯಲು ಮಾಡಿ. ಬಡ ಜನರು ಕಟ್ಟಿದ ಹಣ ವಾಪಸ್​ ನೀಡಿ ಎಂದು ಒತ್ತಾಯಿಸಿದರು. ನಗರದ ಡಿಸಿ ಕಚೇರಿಯಿಂದ ಕುಡಾ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಚೇರಿ ಮುತ್ತಿಗೆ ಹಾಕುವ ವಿಷಯ ಅರಿತ ಪೊಲೀಸರು ನೌಕರರನ್ನು ಹೊರಕಳಿಸಿ ಮುಖ್ಯ ದ್ವಾರಕ್ಕೆ ಬೀಗ ಹಾಕಿಸಿದರು. ಪ್ರತಿಭಟನಕಾರರನ್ನು ಒಳ ಬಿಡದಂತೆ ಗೇಟ್​ ಹಾಕಿ ತಡೆದರು. ಬಳಿಕ ವಶಕ್ಕೆ ಪಡೆದರು.

ಏಕಾಂಗಿಯಾದ ಎಂಎಲ್ಸಿ

ಎಂಎಲ್ಸಿ ಹೇಮಲತಾ ನಾಯಕ ಆರಂಭದಲ್ಲೇ ಕುಡಾ ಕಚೇರಿಗೆ ಆಗಮಿಸಿ ಮುಂಭಾಗ ಕುಳಿತು ಪ್ರತಿಭಟಿಸಿದರು. ಅಕ್ರಮಕ್ಕೆ ಕುಮ್ಮಕ್ಕು ನೀಡಬೇಡಿ. ಕಚೇರಿ ಅವಧಿ ಇದ್ದರೂ ಬೀಗ ಹಾಕಿದ್ದು ಯಾಕೆ ? ಭ್ರಷ್ಟರ ರಕ್ಷಣೆಗೆ ನೀವ್ಯಾಕೆ ನಿಂತಿದ್ದೀರಿ ಎಂದು ಪೊಲೀಸರ ವಿರುದ್ಧ ಗರಂ ಆದರು. ಇತರ ಕಾರ್ಯಕರ್ತರನ್ನು ಒಳ ಬಿಡದೇ ವಶಕ್ಕೆ ಪಡೆದಿದ್ದರಿಂದ ಹೇಮತಾ ನಾಯಕ ಒಂಟಿಯಾಗಿ ಕೆಲಕಾಲ ಪ್ರತಿಭಟಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net