ಉತ್ಸವಕ್ಕಾಗಮಿಸುವ ಗಣ್ಯರ ಆತಿಥ್ಯಕ್ಕೆ ಸಹಕರಿಸಿ

ಗಂಗಾವತಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಮತ್ತು ಲಾಡ್ಜ್ ಮಾಲೀಕರ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು, ತಹಸೀಲ್ದಾರ್ ಯು.ವಸಂತಕುಮಾರಿ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇತರರಿದ್ದರು.
ಗಂಗಾವತಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಟೆಲ್ ಮತ್ತು ಲಾಡ್ಜ್ ಮಾಲೀಕರ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು, ತಹಸೀಲ್ದಾರ್ ಯು.ವಸಂತಕುಮಾರಿ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು ಮನವಿ
  • ಹೋಟೆಲ್-ಲಾಡ್ಜ್ ಮಾಲೀಕರ ಸಭೆ
ಗಂಗಾವತಿ: ಕನಕಗಿರಿ ಉತ್ಸವಕ್ಕೆ ಆಗಮಿಸುವ ಕಲಾವಿದರು ಮತ್ತು ಗಣ್ಯರ ಆತಿಥ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕಿದ್ದು, ಪ್ರವಾಸೋದ್ಯಮ ಉತ್ತೇಜನ ಪೂರಕ ಯೋಜನೆಗಳನ್ನು ಪ್ರೋತ್ಸಾಹಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಂಜುನಾಥ ಗುಂಡೂರು ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಕನಕಗಿರಿ ಉತ್ಸವ ಯಶಸ್ಸಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಹೋಟೆಲ್ ಮತ್ತು ಲಾಡ್ಜ್ ಮಾಲೀಕರ ಸಭೆಯಲ್ಲಿ ಮಾತನಾಡಿದರು. ಮೇ 16 ಮತ್ತು 17ರಂದು ಉತ್ಸವ ನಡೆಯಲಿದ್ದು, ಪ್ರಮುಖ ಗಣ್ಯರು ಮತ್ತು ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ. ವಾಸ್ತವ್ಯಕ್ಕಾಗಿ ಲಾಡ್ಜ್ ಮಾಲೀಕರು ಶೇ.60 ಕೊಠಡಿಗಳನ್ನು ಮೀಸಲಿರಿಸಬೇಕಿದ್ದು, ಯಾವುದೇ ಕಾರಣಕ್ಕೂ ನೆಪ ಹೇಳುವಂತಿಲ್ಲ. ಸ್ವಚ್ಛತೆ ಮತ್ತು ಅಗತ್ಯ ಸೌಲಭ್ಯಗಳು ಕೊಠಡಿಯಲ್ಲಿರಬೇಕು. ಸರ್ಕಾರದಿಂದ ಬಿಲ್ ಪಾವತಿಸಲಾಗುತ್ತಿದ್ದು, ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ನೀಡಬೇಕು. ಪರಂಪರೆ ಬಿಂಬಿಸುವ ಉತ್ಸವಕ್ಕೆ ಸಹಕರಿಸುವುದರಿಂದ ಪ್ರವಾಸೋದ್ಯಮವೂ ಬೆಳೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಡ್ಜ್ ಹೆಸರು ಉಳಿಯಲಿದೆ. ಆಗಮಿಸುವ ಗಣ್ಯರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಲಹೆ ನೀಡಿದರು.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಮಾತನಾಡಿ, ಕೊಠಡಿಗಳನ್ನು ಉಚಿತ ನೀಡಬೇಕಿಲ್ಲ, ಸರ್ಕಾರ ನಿಗದಿಪಡಿಸಿದ ದರಕ್ಕೆ ನೀಡಬೇಕು. 15 ದಿನಗಳಲ್ಲಿ ಬಿಲ್ ಪಾವತಿಸಲಾಗುತ್ತಿದ್ದು, ಯಾವುದೇ ಭಯ ಬೇಡ. ಕೊಠಡಿ ಜತೆಗೆ ಆಹಾರ ನೀಡಬೇಕಿದ್ದು, ಸಕಾಲಕ್ಕೆ ಬಿಲ್ ನೀಡಿದರೆ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. 15 ಲಕ್ಷ ರೂ. ನೀಡುವಂತೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಹಸೀಲ್ದಾರ್ ಯು.ವಸಂತಕುಮಾರ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಕಂದಾಯ ಅಧಿಕಾರಿ ಮಹೆಬೂಬ್ ಪಾಶಾ, ವಿಷಯ ನಿರ್ವಾಹಕರಾದ ಬಸವರಾಜ ಸುಳಕೋಡ್, ಶ್ರೀರಾಂ ಜೋಶಿ ಸೇರಿ ವಿವಿಧ ಲಾಡ್ಜ್‌ಗಳ ನಿರ್ವಹಣೆಗಾರರು ಮತ್ತು ಮಾಲೀಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net