ಮೇ 16-17ಕ್ಕೆ ಕನಕಗಿರಿ ಉತ್ಸವ

ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.
ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವಭಾವಿ ಸಭೆಯಲ್ಲಿ ನಿರ್ಧಾರ
  • 6 ಕೋಟಿ ರೂ. ಅನುದಾನ ಮಂಜೂರು
ಕನಕಗಿರಿ: ಐತಿಹಾಸಿಕ ಕನಕಗಿರಿ ಉತ್ಸವವನ್ನು ಮೇ 16 ಹಾಗೂ 17ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಶ್ರೀ ಕನಕಾಚಲ ದೇವಸ್ಥಾನದಲ್ಲಿ ಮಂಗಳವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕಗಿರಿ ಉತ್ಸವಕ್ಕೆ 6 ಕೋಟಿ ಹಾಗೂ ಆನೆಗುಂದಿ ಉತ್ಸವ ಆಚರಣೆಗೆ 3 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಕನಕಗಿರಿ ಉತ್ಸವವನ್ನು ಮೇ 9 ಹಾಗೂ 10ರಂದು ಆಚರಿಸಲು ತೀರ್ಮಾನಿಸಿ 18 ಸಮಿತಿಗಳನ್ನು ರಚಿಸಲಾಗಿತ್ತು. ಆದರೆ, ಪಟ್ಟಣದ ಗ್ರಾಮ ದೇವತೆ ಜಾತ್ರೆ ಹಾಗೂ ಹುಲಗಿಯ ಜಾತ್ರೆ ನಿಮಿತ್ತ ಸ್ಥಳೀಯರ ಸಲಹೆಯಂತೆ ಉತ್ಸವದ ದಿನಾಂಕವನ್ನು ಮೇ 16 ಹಾಗೂ 17ಕ್ಕೆ ನಿದಗಿಪಡಿಸಲಾಗಿದೆ ಎಂದರು.
ಉತ್ಸವ ಆಚರಣೆಯಲ್ಲಿ ವೈಯಕ್ತಿಕ ಪ್ರತಿಷ್ಠೆಯಿಲ್ಲ. ಕನಕಗಿರಿಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಕನಕಾಚಲಪತಿ ಜಾತ್ರೆ ಮತ್ತು ಉತ್ಸವ ಜತೆಗೆ ನಡೆಸುವ ಉದ್ದೇಶವಿತ್ತು. ಇದಕ್ಕೆ ವಿರೋಧ ವ್ಯಕ್ತವಾದ್ದರಿಂದ ಆಚರಣೆಯಾಗಲಿಲ್ಲ. ಇದೀಗ ಸಾರ್ವಜನಿಕರ ಒತ್ತಾಯದಿಂದ ಉತ್ಸವ ಆಚರಿಸಲಾಗುತ್ತಿದ್ದು, ಮುಂದಿನ ವರ್ಷ ಜಾತ್ರೆ ಜತೆಗೆ ಉತ್ಸವ ಆಚರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮೇ 14 ಹಾಗೂ 15ರಂದು ಹೊನಲು ಬೆಳಕಿನ ಕ್ರೀಡಾಕೂಟಗಳು ನಡೆಯಲಿವೆ. ಉತ್ಸವದ ದಿನಗಳಂದು ಬಡ ಹಾಗೂ ಮಧ್ಯಮ ವರ್ಗದವರೂ ಹೆಲಿಕ್ಯಾಪ್ಟರ್‌ನಲ್ಲಿ ಓಡಾಡುವ ನಿಟ್ಟಿನಲ್ಲಿ 2 ದಿನ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ಮೈಸೂರು ದಸರಾ ಮಾದರಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು. ವಿಶೇಷವಾಗಿ ಆಕಾಶದಲ್ಲಿ ಡ್ರೋನ್ ಮೂಲಕ ಸ್ಮಾರಕಗಳ ಚಿತ್ರ ರಚನೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಚನೆಯಾದ ಸಮಿತಿಗಳಿಂದ ಮೇಲಿಂದ ಮೇಲೆ ಸಿದ್ಧತಾ ಸಭೆಗಳು ಆಗಬೇಕು. ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಉತ್ತಮ ಪ್ರದರ್ಶನಕ್ಕೆ ಆಸಕ್ತಿ ವಹಿಸಬೇಕು. ಬಸ್‌ಗಳಿಗೆ ಪೋಸ್ಟರ್ ಅಂಟಿಸಿ ಪ್ರಚುರಪಡಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಬೆಳಗ್ಗೆ 9.30ಕ್ಕೆ ಮೆರವಣಿಗೆ ಆರಂಭಿಸಿ 12ರೊಳಗೆ ಮುಕ್ತಾಯಗೊಳಿಸಬೇಕು. ಮೆರವಣಿಗೆಯುದ್ದಕ್ಕೂ ತಣ್ಣಗಿನ ಕುಡಿವ ನೀರು, ಎಪಿಎಂಸಿಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು ತಿಳಿಸಿದರು.

ಬಸ್ ವ್ಯವಸ್ಥೆಗೆ ಕ್ರಮ:

ಉತ್ಸವದಲ್ಲಿ ಎರಡು ವೇದಿಕೆ ನಿರ್ಮಿಸಲಾಗುವುದು. ಮುಖ್ಯ ವೇದಿಕೆಗೆ ಉಡಚಪ್ಪ ನಾಯಕ ವೇದಿಕೆ ಎಂದು, ಗೋಷ್ಠಿ ನಡೆಯುವ ವೇದಿಕೆಗೆ ಜಯತೀರ್ಥ ರಾಜಪುರೋಹಿತ ಹೆಸರನ್ನಿಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಾರ್ವಜನಿಕರ ಒತ್ತಾಸೆಯಂತೆ ಸಂಜೆ 7ರಿಂದ 8, 9ಗಂಟೆಗೆ ಬಸ್ಸುಗಳನ್ನು ಕೊಪ್ಪಳದಿಂದ ಕನಕಗಿರಿಗೆ ಸಂಚರಿಸಲು ಕ್ರಮ ವಹಿಸುವಂತೆ ಸಚಿವರು ಕೆಎಸ್‌ಆರ್‌ಟಿಸಿ ಡಿಸಿ ಸೀನಣ್ಣಗೆ ಸೂಚಿಸಿದರು.

ಸಾಂಸ್ಕೃತಿಕ ನೀತಿಗೆ ಪ್ರಯತ್ನ:

ಉತ್ಸವಗಳಲ್ಲಿ ಶೇ.50 ಸ್ಥಳೀಯ ಕಲಾವಿದರು, ಶೇ.40 ರಾಷ್ಟ್ರೀಯ ಕಲಾವಿದರು, ಶೇ.10 ಅಂತಾರಾಷ್ಟ್ರೀಯ ಕಲಾವಿದರಿಗೆ ಮೀಸಲಿಡಲು ಸಾಂಸ್ಕೃತಿಕ ನೀತಿ ತರುವ ಉದ್ದೇಶವಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಡಿಸಿ ಡಾ.ಸುರೇಶ ಬಿ. ಇಟ್ನಾಳ ಮಾತನಾಡಿ, ಕನಕಗಿರಿ ಉತ್ಸವಕ್ಕಾಗಿ ಈಗಾಗಲೇ 6 ಕೋಟಿ ರೂ. ಅನುದಾನ ನಿಗದಿಯಾಗಿದೆ. ಇದಕ್ಕಾಗಿ 18 ಸಮಿತಿ ರಚಿಸಿ ಕಾರ್ಯ ಹಂಚಿಕೆ ಮಾಡಿದ್ದೇವೆ. ಎರಡು ವೇದಿಕೆಗಳ ನಿರ್ಮಾಣಕ್ಕೆ, ಸ್ಥಳೀಯ ಹಾಗೂ ರಾಜ್ಯದ ಕಲಾವಿದರ ಆಹ್ವಾನಕ್ಕೆ ಕ್ರಮ ವಹಿಸಿದ್ದೇವೆ. ಕ್ರೀಡಾಕೂಟ ಸೇರಿದಂತೆ ಸಭೆಯಲ್ಲಿ ಚರ್ಚೆಯಾಗಿ ನಿರ್ಣಯಿಸುವ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಜಿಪಂ ಸಿಇಒ ವರ್ಣೀತ್ ನೇಗಿ, ಪಪಂ ಅಧ್ಯಕ್ಷೆ ಟಿ.ಜೆ. ತನುಶ್ರೀ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಎಸಿಡಿ ಸಿದ್ರಾಮೇಶ್ವರ, ಎಸಿ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ನ್ಯಾಮಗೌಡರ ಇದ್ದರು.

ಬಾಕಿ ವಸೂಲಿಗೆ ಸೂಚನೆ:

ಸಭೆಯಲ್ಲಿ ಉತ್ಸವ ಆಚರಣೆ ಬಗ್ಗೆ ಸಲಹೆ ನೀಡಲು ಅವಕಾಶ ನೀಡಿದಾಗ, ಕುಡಿವ ನೀರು, ಬಸ್ ಸಂಚಾರ ಸಮಸ್ಯೆ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದರು. ಅಲ್ಲದೆ ದೇವಸ್ಥಾನಕ್ಕೆ ಬರಬೇಕಾದ ತೆಂಗಿನಕಾಯಿ ಹರಾಜು ಬಾಕಿ ಮೊತ್ತ ವಸೂಲಿಗೆ ಆಗ್ರಹಿಸಿದ್ದರಿಂದ ಸ್ಥಳದಲ್ಲಿದ್ದ ಸಿಡಿಗೆ ಬಾಕಿ ವಸೂಲಿಗೆ ಕ್ರಮ ವಹಿಸುವಂತೆ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net