ಕನಕಗಿರಿ ಉತ್ಸವಕ್ಕೆ ಅನುದಾನ ಮಂಜೂರು

ಬಂಕಾಪುರ ಬಳಿ ನಡೆಯುತ್ತಿರುವ ಅಮೃತ ಯೋಜನೆಯ ಕಾಮಗಾರಿಯನ್ನು ಡಿಸಿ ಡಾ. ಸುರೇಶ ಬಿ. ಇಟ್ನಾಳ ವೀಕ್ಷಿಸಿದರು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಿಡಿ ಮಂಜುನಾಥ ಗುಂಡೂರು ಇತರರಿದ್ದರು.
ಬಂಕಾಪುರ ಬಳಿ ನಡೆಯುತ್ತಿರುವ ಅಮೃತ ಯೋಜನೆಯ ಕಾಮಗಾರಿಯನ್ನು ಡಿಸಿ ಡಾ. ಸುರೇಶ ಬಿ. ಇಟ್ನಾಳ ವೀಕ್ಷಿಸಿದರು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಿಡಿ ಮಂಜುನಾಥ ಗುಂಡೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಮಾಹಿತಿ
  • ವಿವಿಧ ಕಾಮಗಾರಿ ಪರಿಶೀಲನೆ
ಕನಕಗಿರಿ: ಐತಿಹಾಸಿಕ ಕನಕಗಿರಿ ಉತ್ಸವ ಆಚರಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 3 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳ ಪ್ರಗತಿ, ಸ್ಮಾರಕಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕನಕಗಿರಿ, ಆನೆಗೊಂದಿ ಉತ್ಸವಕ್ಕೆ ಅನುದಾನ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಕನಕಗಿರಿ ಉತ್ಸವ ಆಚರಣೆಗೆ ಅನುದಾನ ಬಿಡುಗಡೆ ಮಾಡಿದ್ದು, ಆನೆಗೊಂದಿ ಉತ್ಸವಕ್ಕೆ ಮಂಜೂರಿಗೆ ಇನ್ನಷ್ಟು ಮಾಹಿತಿ ಕೇಳಿದ್ದಾರೆ ಎಂದರು
.
ರಾಣಿಯರ ಸ್ನಾನಗೃಹ, ವೆಂಕಟಾಪತಿ ಬಾವಿ ರಾಜ್ಯ ಸಂರಕ್ಷಿತ ಸ್ಮಾರಕವಾಗಲಿದ್ದು, ಅಲ್ಲಿವರೆಗೆ ಬಾವಿ ನಿರ್ವಹಣೆ ಅವಶ್ಯ ಇರುವುದರಿಂದ ಆದಾಯ ಅಗತ್ಯವಾಗಿದೆ. ಸಚಿವರ ಮಾರ್ಗದರ್ಶನದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಉಪ ಸಮಿತಿ ರಚಿಸಿ ಅಭಿವೃದ್ಧಿ ಮಾಡಲಾಗುವುದು. ಪ್ರೀವೆಡ್ಡಿಂಗ್ ಶೂಟಿಂಗ್‌ಗೆ ಶುಲ್ಕ ನಿಗದಿಪಡಿಸಲಾಗುವುದು. ಈ ಸ್ಮಾರಕದ ಅಭಿವೃದ್ಧಿಗೆ ಈಗಾಗಲೇ ಮೀಸಲಿಟ್ಟಿರುವ ಅನುದಾನ ದುರ್ಬಳಕೆಯಾಗಿರುವ ಬಗ್ಗೆ ಮಾಹಿತಿ ಇದ್ದು, ಸದ್ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಹಂತ-ಹಂತವಾಗಿ ದೇವಸ್ಥಾನ ಅಭಿವೃದ್ಧಿ ಆಗಬೇಕಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ದಾಸೋಹ ಭವನದ ಕಾಮಗಾರಿ ಪೂರ್ಣಗೊಳಿಸುವುದು, ತ್ರಿವೇಣಿ ಸಂಗಮ, ಪುಷ್ಕರಣಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಅಕ್ರಮ ಮರಳು ಅಡ್ಡೆಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿದೆ. ತಾಲೂಕಿನಲ್ಲಿ 5 ಅಧಿಕೃತ ಮರಳು ಪಾಯಿಂಟ್‌ಗಳಿದ್ದು, ಅಕ್ರಮ ದ ಬಗ್ಗೆ ಪರಿಶೀಲಿಸಲಾಗುವುದು. ಇನ್ನು ಮುಂದೆ ಆಗಾಗ ದಾಳಿ ನಡೆಸಿ ಅಕ್ರಮ ನಿಯಂತ್ರಣ ಮಾಡಲಾಗುವುದು. ಕಳ್ಳತನ ಪ್ರಕರಣ ತಡೆಯಲು ಎಸ್ಪಿಗೆ ತಿಳಿಸಲಾಗುವುದು. ಆಶ್ರಯ ಕಾಲನಿಗಾಗಿ ಮೀಸಲಿರಿಸಿದ್ದಲ್ಲಿ ಜಾಗದಲ್ಲಿ ಉಳಿದಿರುವ ನಿವೇಶನಗಳ ಹಂಚಿಕೆಗೆ ಕ್ರಮ ವಹಿಸಲಾಗುವುದು. ಅಮೃತ ಯೋಜನೆಯಡಿ ಕುಡಿವ ನೀರು ಸರಬರಾಜು ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.

ನೇತ್ರಾಧಿಕಾರಿ ನೇಮಿಸಿ

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದನ್ನು ತಾಲೂಕು ವೈದ್ಯಾಧಿಕಾರಿ ಗೌರಿಶಂಕರ ಅವರಿಂದ ಮಾಹಿತಿ ಪಡೆದರು. ನಗರ ಸೇರಿ ಗ್ರಾಮೀಣ ಪ್ರದೇಶದ ಜನ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದು, ರೋಗಿಗಳ ಅನುಕೂಲಕ್ಕೆ ಖಾಲಿಯಿರುವ ವೈದ್ಯರನ್ನು ನೇಮಿಸಬೇಕು. ವಾರದಲ್ಲಿ 2 ದಿನ ನೇತ್ರಾಧಿಕಾರಿಗಳನ್ನು ನಿಯೋಜಿಸಲು ಸೂಚಿಸಿದರು.

ಲೋಪವಾಗದಂತೆ ಕಾಮಗಾರಿ ನಿರ್ವಹಿಸಿ

ತಾಲೂಕು ಪ್ರಜಾಸೌಧ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಡಿಸಿ, ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ವಿದ್ಯುತ್ ಹಾಗೂ ಕುಡಿವ ನೀರಿನ ಸೌಲಭ್ಯ ಒದಗಿಸಲು ಪ್ರಾಮುಖ್ಯ ನೀಡಬೇಕು. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಗುತ್ತಿಗೆದಾರರು ಜೂ.15ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದರು.

ಏನಾದರೂ ಆಗಿ ಒಳ್ಳೆಯ ಮನುಷ್ಯರಾಗಿ

ಇಲ್ಲಿನ ಲಕ್ಷ್ಮೀದೇವಿ ಕೆರೆ ರಸ್ತೆಯಲ್ಲಿನ ಮುರಾರ್ಜಿ ಶಾಲೆಗೆ ಭೇಟಿ ನೀಡಿದ ಡಿಸಿ, ಮಕ್ಕಳೊಂದಿಗೆ ಚರ್ಚಿಸಿದರು. ಯಾರಿಗಾದರೂ ಎಚ್‌ಬಿ ಕಡಿಮೆಯಿದೆ ಎಂದು ಪ್ರಶ್ನಿಸಿದರು. ಕಡಿಮೆಯಿದ್ದ ವಿದ್ಯಾರ್ಥಿಗಳಿಗೆ ಔಷಧೋಪಚಾರ ಜತೆಗೆ ಪೌಷ್ಟಿಕ ಆಹಾರ ಸೇವಿಸಲು ತಿಳಿಸಿದರು. ಯಾರು ರಾಜಕಾರಣಿ, ವಿಜ್ಞಾನಿ, ಐಎಎಸ್ ಅಧಿಕಾರಿ ಆಗುತ್ತೀರಿ? ಎಂದು ಪ್ರಶ್ನಿಸಿ ವಿದ್ಯಾರ್ಥಿಗಳಿಂದ ಉತ್ತರ ಪಡೆದರು. ವಸತಿ ನಿಲಯದಲ್ಲಿ ಊಟೋಪಚಾರದ ಬಗ್ಗೆ ತಿಳಿದುಕೊಂಡರು. ಏನಾದರೂ ಆಗಿ ಮೊದಲು ಒಳ್ಳೆಯ ಮನುಷ್ಯರಾಗಿ ಎಂದು ತಿಳಿಸಿದರು. ನಂತರ ಶಾಲೆಯಲ್ಲಿಯೇ ಊಟ ಸವಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net