ಕನಸಾಗೇ ಉಳಿದ ಕನಕಗಿರಿ ಪ್ರಾಧಿಕಾರ

ಕನಕಗಿರಿ ಪಟ್ಟಣದಲ್ಲಿರುವ ಐತಿಹಾಸಿಕ ವೆಂಕಟಪತಿ ಬಾವಿಯ ನೋಟ.
ಕನಕಗಿರಿ ಪಟ್ಟಣದಲ್ಲಿರುವ ಐತಿಹಾಸಿಕ ವೆಂಕಟಪತಿ ಬಾವಿಯ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದಿನ ಬಜೆಟ್‌ನಲ್ಲಿ ಇದ್ದಿಲ್ಲ ಪ್ರಸ್ತಾವ
  • ಸಿಎಂ ಮನವೊಲಿಸುವರೆ ಸಚಿವ ತಂಗಡಗಿ?
ಕನಕಗಿರಿ: ಇಲ್ಲಿನ ಸ್ಮಾರಕಗಳ ರಕ್ಷಣೆ ಜತೆಗೆ ಪಟ್ಟಣವನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ವರ್ಷದೊಳಗೆ ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿ ಎರಡು ವರ್ಷವಾದರೂ ಈಡೇರಿಸಿಲ್ಲ ಎನ್ನುವ ಮಾತುಗಳು ನಾಗರಿಕರಲ್ಲಿ ಚರ್ಚೆಯಾಗುತ್ತಿವೆ.
ಪಟ್ಟಣದಲ್ಲಿ ನಾಲ್ಕನೇ ಬಾರಿಗೆ 2024ರ ಮಾ.11ರಂದು ಗತವೈಭವ ಸಾರುವ ಐತಿಹಾಸಿಕ ಕನಕಗಿರಿ ಉತ್ಸವಕ್ಕೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ತಾವು ಆಡಳಿತಕ್ಕೆ ಬಂದು ಒಂಬತ್ತು ತಿಂಗಳಾಗಿದ್ದು, ಪಂಚ ಗ್ಯಾರಂಟಿ, ರಾಜ್ಯದಲ್ಲಿನ ಅಭಿವೃದ್ಧಿಗೆ ಪಣತೊಟ್ಟಿದ್ದೇವೆ. ವಿಶೇಷವಾಗಿ ಕೊಪ್ಪಳ ಜಿಲ್ಲೆಗೆ ಬಂದರೆ ನನಗೆ ಸ್ವಂತ ಕ್ಷೇತ್ರದಂತೆ ಭಾಸವಾಗುತ್ತದೆ ಎಂದು 1991ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಮೆಲುಕು ಹಾಕಿದ್ದ ಅವರು ಅಂಜನಾದ್ರಿ, ಯಲಬುರ್ಗಾ, ಕನಕಗಿರಿ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದಿದ್ದರು. ಆದರೆ, ಪ್ರಾಧಿಕಾರ ರಚನೆ ಕನಸಾಗಿಯೇ ಉಳಿಯುವುದೆ ಎನ್ನುವ ಪ್ರಶ್ನೆ ಪ್ರಜ್ಞಾವಂತರದ್ದಾಗಿದೆ.
ಇತಿಹಾಸವನ್ನು ಮುಂದಿನ ಪೀಳಿಗೆಗೆ ಒಯ್ಯುವ ನಿಟ್ಟಿನಲ್ಲಿ ನಾನಾ ಕಡೆಗಳಲ್ಲಿ ಉತ್ಸವ ಆಚರಿಸಲಾಗುತ್ತದೆ. ಅದರಂತೆ ಕನಕಗಿರಿ ಉತ್ಸವ ಮಾಡಲಾಗುತ್ತಿದ್ದು, ಉತ್ಸವವನ್ನು ಮುಂದುವರಿಸಿ ಎಂದು ಸಚಿವ ಶಿವರಾಜ ತಂಗಡಗಿಯ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ಐತಿಹಾಸಿಕ ಹಿನ್ನೆಲೆಯ ಕನಕಗಿರಿಗೆ ವರ್ಷದೊಳಗೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, 2025ರ ಬಜೆಟ್‌ನಲ್ಲಿ ಪ್ರಾಧಿಕಾರದ ಪ್ರಸ್ತಾವವೇ ಇಲ್ಲದಿರುವುದು ಇಲ್ಲಿನ ಜನರ ನಿರಾಸೆಗೆ ಕಾರಣವಾಗಿತ್ತು. ಇದೀಗ ಮತ್ತೊಂದು ಬಜೆಟ್‌ಗೆ ಕಾಲ ಸನ್ನಿಹಿತವಾಗಿದ್ದು, ಸಚಿವ ಶಿವರಾಜ ತಂಗಡಗಿ ಸಿಎಂ ಗಮನಕ್ಕೆ ತಂದು ಮಾತು ಉಳಿಸಿಕೊಳ್ಳುವಂತೆ ಮನವೊಲಿಸುತ್ತಾರೆಯೇ ಕಾದು ನೋಡಬೇಕು.

ಸ್ಮಾರಕಗಳಿಗಿಲ್ಲ ರಕ್ಷಣೆ

ವಿಜಯನಗರ ಸಾಮ್ರಾಜ್ಯದ ಸಾಮಂತರಾದ ನಾಯಕ ವಂಶಸ್ಥರು ಕನಕಗಿರಿಯಲ್ಲಿ ಆಳ್ವಿಕೆ ಮಾಡಿದ್ದಾರೆ. ವಿಜಯನಗರ ಅರಸರಂತೆ ನಾಯಕ ವಂಶಸ್ಥರು ಕಲೆ, ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕನಕಾಚಲಪತಿ ದೇವಸ್ಥಾನ, ವೆಂಕಟಪತಿ ಬಾವಿ, ಪುಷ್ಕರಣಿ ಸೇರಿ 701 ಬಾವಿ, 701 ದೇವಸ್ಥಾನಗಳು ನಿರ್ಮಾಣವಾಗಿದ್ದು, ಇಂದು ರಕ್ಷಣೆಯಿಲ್ಲದೇ ಹಾಳಾಗಿವೆ. ಇನ್ನು ಛತ್ರಪತಿ ಶಿವಾಜಿ ಮಹರಾಜರ ಸಹೋದರ ಸಂಭಾಜಿಯ ಸಮಾಧಿಯೂ ಇಲ್ಲಿದೆ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ.

ಅಭಿವೃದ್ಧಿಗೆ ಅನುಕೂಲ

ಕನಕಗರಿ ಅಭಿವೃದ್ಧಿ ಪ್ರಾಧಿಕಾರವಾದರೆ ಸ್ಮಾರಕಗಳ ರಕ್ಷಣೆಯಾಗುತ್ತವೆ. ವಿಶೇಷ ಅಧಿಕಾರಿಗಳು ನೇಮಕಗೊಳ್ಳುತ್ತಾರೆ. ಪ್ರತ್ಯೇಕ ಅನುದಾನ ದೊರೆಯಲಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಸಂಗ್ರಹಾಲಯ ನಿರ್ಮಾಣವಾಗುತ್ತವೆ. ಪ್ರವಾಸೋದ್ಯಮ ಪ್ರಗತಿ ಕಾಣಲಿದ್ದು, ಇಲ್ಲಿನ ಇತಿಹಾಸ ನಾಡಿನೆಲ್ಲೆಡೆಗೆ ಪರಿಚಯವಾಗಲು ಪೂರಕವಾಗುತ್ತದೆ. ಇನ್ನು ಪ್ರಾಧಿಕಾರವಾದರೆ ಇಲ್ಲಿನ ನಿವಾಸಿಗಳಿಗೆ ತಾಂತ್ರಿಕ ಸಮಸ್ಯೆಯಾಗುತ್ತದೆ ಎನ್ನುವ ಆತಂಕ ಕೆಲವರಲ್ಲಿದೆ. ಆದರೆ, ಸಮಸ್ಯೆ ಬದಲಿಗೆ ಅಭಿವೃದ್ಧಿಯಾಗುತ್ತದೆ ಎಂಬುದು ಅಧಿಕಾರಿಗಳ ಮಾತಾಗಿದೆ.
"

2024ರ ಉತ್ಸವದಲ್ಲಿ ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ ಸಿಎಂ ಘೋಷಿಸಿದಾಗ ಸಂತೋಷವಾಗಿತ್ತು. ಕೊಟ್ಟ ಭರವಸೆಯನ್ನು ಸಿಎಂ ಈಡೇರಿಸಿದರೆ ಕೂಡಲಸಂಗಮ, ಕಾಗಿನೆಲೆಯಂತೆ ಇಲ್ಲಿಗೂ ವಿಶೇಷ ಅನುದಾನ ಬರಲಿದ್ದು, ಪಟ್ಟಣದ ಅಭಿವೃದ್ಧಿ ಜತೆಗೆ ಪ್ರವಾಸೋದ್ಯಮ ಬೆಳೆಯಲಿದೆ.

ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ದೇವಸ್ಥಾನ ಸೇರಿ ಸ್ಮಾರಕಗಳನ್ನು ಅಭಿವೃದ್ಧಿಗೊಳಿಸಬೇಕೆಂಬ ಅಸೆ ಬಹಳಷ್ಟಿದೆ. ಅದಕ್ಕಾಗಿ ಬೀಜ ಬಿತ್ತಿದ್ದೇನೆ. ಚಿಗುರೋಡೆದು ಮರವಾಗಿ ಬೆಳೆಯಬೇಕಿದೆ. ಕಳೆದ ಹತ್ತದಿನೈದು ವರ್ಷಗಳಿಂದ ಸವದತ್ತಿ, ಹುಲಿಗಿ ಪ್ರಾಧಿಕಾರ ಮಾಡಬೇಕೆಂಬ ಆಗ್ರಹಕ್ಕೆ ಇದೀಗ ಫಲ ಸಿಕ್ಕಿದೆ. ಕನಕಗಿರಿ ದೇವಸ್ಥಾನ ಪ್ರಾಧಿಕಾರ ಮಾಡುವುದಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಾಧಕ ಬಾಧಕಗಳನ್ನು ತಿಳಿದುಕೊಳ್ಳಲಾಗುವುದು. ಅಭಿವೃದ್ಧಿಯಾಗುವುದಾದರೆ ಪ್ರಾಧಿಕಾರ ರಚನೆಗೆ ಮುಂದಾಗಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net