ಬ್ರಹ್ಮಕಲಶೋತ್ಸವ ಜ್ಯೋತಿಯಾತ್ರೆಗೆ ಅದ್ದೂರಿ ಸ್ವಾಗತ

ಗಂಗಾವತಿ ಪ್ರವೇಶಿಸಿದ ಅಯೋಧ್ಯೆ ಶ್ರೀರಾಮ ಮಂದಿರದಿಂದ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ  ಹನುಮಗಿರಿ ಬ್ರಹ್ಮಕಲಶೋತ್ಸವದ ಜ್ಯೋತಿ ಯಾತ್ರೆಯನ್ನು ಸ್ಥಳೀಯ ಹನುಮಮಾಲಾಧಾರಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ ಇತರರಿದ್ದರು.
ಗಂಗಾವತಿ ಪ್ರವೇಶಿಸಿದ ಅಯೋಧ್ಯೆ ಶ್ರೀರಾಮ ಮಂದಿರದಿಂದ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹನುಮಗಿರಿ ಬ್ರಹ್ಮಕಲಶೋತ್ಸವದ ಜ್ಯೋತಿ ಯಾತ್ರೆಯನ್ನು ಸ್ಥಳೀಯ ಹನುಮಮಾಲಾಧಾರಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೀಪಾರಾಧನೆ-ಭಜನೆಯೊಂದಿಗೆ ಬರಮಾಡಿಕೊಂಡ ಹನುಮ ಮಾಲಾಧಾರಿಗಳು
ಗಂಗಾವತಿ: ನಗರ ಪ್ರವೇಶಿಸಿದ ಉತ್ತರ ಪ್ರದೇಶದ ಅಯೋಧ್ಯೆ ಶ್ರೀರಾಮ ಮಂದಿರದಿಂದ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹನುಮಗಿರಿ ಬ್ರಹ್ಮಕಲಶೋತ್ಸವ ಜ್ಯೋತಿ ಯಾತ್ರೆಯನ್ನು ಸ್ಥಳೀಯ ಹನುಮ ಮಾಲಾಧಾರಿಗಳು ಸೋಮವಾರ ಅದ್ದೂರಿಯಾಗಿ ಬರಮಾಡಿಕೊಂಡರು.
ನಗರದ ಸಿಬಿಎಸ್ ವೃತ್ತದಿಂದ ಆನೆಗೊಂದಿ ರಸ್ತೆಯ ಶ್ರೀರಾಮ ಮಂದಿರದವರೆಗೂ ಜರುಗಿದ ಜ್ಯೋತಿ ಯಾತ್ರೆಯುದ್ದಕ್ಕೂ ಮಾಲಾಧಾರಿಗಳು ದೀಪಾರಾಧನೆ ಮತ್ತು ಭಜನೆಯೊಂದಿಗೆ ಸ್ವಾಗತಿಸಿದ್ದು, ಗಾಂಧಿ ವೃತ್ತದಲ್ಲಿ ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣದೊಂದಿಗೆ ಧಾರ್ಮಿಕ ಸಂಕೇತಗಳ ದೀಪಗಳನ್ನು ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು. ನಗರ ಮತ್ತು ಗ್ರಾಮೀಣ ಭಾಗದಿಂದ ಬಂದಿದ್ದ ಮಾಲಾಧಾರಿಗಳು ಶ್ರೀರಾಮಮಂದಿರದವರೆಗೂ ಸಂಕೀರ್ತನೆ ಯಾತ್ರೆ ನಡೆಸಿದರು. ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮ ಮತ್ತು ಪೂತನೀ ಹಗಲು ವೇಷಧಾರಿಗಳು ಭಾಗವಹಿಸಿದ್ದರು.
ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ನಗರಸಭೆ ಮಾಜಿ ಸದಸ್ಯರಾದ ಪರಶುರಾಮ್ ಮಡ್ಡೇರ್, ಉಮೇಶ ಸಿಂಗನಾಳ್, ವಾಸುದೇವ ನವಲಿ, ಬಿಜೆಪಿ ಮುಖಂಡರಾದ ಚಂದ್ರು ಹಿರೂರ್, ಸಂತೋಷ ಕೆಲೋಜಿ, ಮಾಲಾಧಾರಿಗಳಾದ ನಂದ ಕಿಶೋರ, ಪ್ರಶಾಂತ ಚಿತ್ರಗಾರ, ಅಯ್ಯನಗೌಡ ಹೇರೂರು, ಶಿವಕುಮಾರ ಅರಕೇರಿ ಇತರರಿದ್ದರು.

ಮಸೀದಿ ಮುಂದೆ ಕರ್ಪೂರದಾರತಿ

ಪುತ್ತೂರಿನ ಹನುಮಗಿರಿಯ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಹಮ್ಮಿಕೊಂಡಿದ್ದು, ಅಯೋಧ್ಯೆಯಿಂದ ತಂದ ಜ್ಯೋತಿ ರಥ ಯಾತ್ರೆಗೆ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರಕ್ಕೆ ಯಾತ್ರೆ ಬರುವ ಮಾಹಿತಿ ಅರಿತ ಪೊಲೀಸರು ಎರಡು ದಿನಗಳ ಮುನ್ನವೇ ನಗರ ಠಾಣೆಯಲ್ಲಿ ಮಾಲಾಧಾರಿಗಳಿಂದ ಸಭೆ ನಡೆಸಿದ್ದು, ಮಸೀದಿ ಮುಂದೆ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸದಂತೆ ಷರತ್ತು ವಿಧಿಸಿದ್ದರು. ಒಪ್ಪಿಕೊಂಡಿದ್ದ ಮಾಲಾಧಾರಿಗಳು, ಜಾಮಿಯಾ ಮಸೀದಿ ಮುಂದೆ ಬರುತ್ತಿದ್ದಂತೆ ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದರಿಂದ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಯೊಂದಿಗೆ ವಾಗ್ವಾದ ನಡೆಸಿದರು. ಮಸೀದಿ ಮುಂದಿನ ರಸ್ತೆಯಲ್ಲಿ ಕರ್ಪೂರದಾರತಿ ಬೆಳಗಿಸಿ ಮುನ್ನಡೆದಿದ್ದರಿಂದ ಕೆಲಕಾಲ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪೊಲೀಸರೇ ಹಿಂದಕ್ಕೆ ಸರಿದಿದ್ದರಿಂದ ಯಾತ್ರೆ ಮುನ್ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net