ಕೊಪ್ಪಳ : ಪ್ರಸ್ತುತ ಪತ್ರಿಕೋದ್ಯಮ ಇತರ ಉದ್ಯಮಗಳಂತಾಗಿದೆ. ಅನೇಕ ಸವಾಲುಗಳ ನಡುವೆ ಕೆಲಸ ಮಾಡುವಂತ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಹೇಳಿದರು.
ನಗರದ ಪಾನಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ನಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. .
ಇಂದು ಮೊದಲಿನಂತೆ ನಿರ್ಭೀತಿಯಿಂದ ಬರೆಯುವ ಸ್ಥಿತಿಯಲ್ಲಿ ಪತ್ರಕರ್ತರಿಲ್ಲ. ಪ್ರಶ್ನೆ ಕೇಳುವುದು ಕಡಿಮೆಯಾಗುತ್ತಿದೆ. ಸಂದಿಗ್ಧತೆ ನಡುವೆಯೂ ವೃತ್ತಿ ಬದ್ಧತೆ ಉಳಿಸಿಕೊಳ್ಳಬೇಕು. ಪತ್ರಿಕಾ ವೃತ್ತಿ ಮೌಲ್ಯ ಕಾಪಾಡಬೇಕು. ತನಿಖಾ ಪತ್ರಿಕೋದ್ಯಮ ಮರೆಯಾಗಿದೆ. ಯುವ ಪತ್ರಕರ್ತರು ಗಟ್ಟಿತನ ಉಳಿಸಿಕೊಳ್ಳಬೇಕು. ಸಂವಿಧಾನದ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿದ್ದು ಸಮಾಜ ಸುಧಾರಣೆಗಾಗಿ ಪ್ರಶ್ನೆ ಮಾಡಬೇಕು. ನಾವು ಪ್ರಶ್ನಿಸಿದಾಗಲೇ ಒಂದಷ್ಟು ಸುಧಾರಣೆ ಕಾಣಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಆನಂದ ಬೈದನಮನೆ ಮಾತನಾಡಿ, ವೃತ್ತಿ ಬದುಕಿನ ದೈನಂದಿನ ಸವಾಲುಗಳ ನಡುವೆಯೂ ವೈಯಕ್ತಿಕ ಖುಷಿಗಳನ್ನು ತ್ಯಾಗ ಮಾಡಿ ಕೆಲಸ ಮಾಡಬೇಕಾಗಿದೆ. ಪತ್ರಿಕೋದ್ಯಮ ಹಾಗೂ ಮೌಲ್ಯದ ಸ್ವರೂಪಗಳು ಬದಲಾವಣೆಯಾಗಿವೆ. ಮಾಧ್ಯಮ ರಂಗ ಉದ್ಯಮವಾದ ಕಾರಣ ಅನೇಕ ಸಮಸ್ಯೆ ಹಾಗೂ ಸಂಕಷ್ಟ ಎದುರಾಗಿವೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಸರ್ಕಾರ ಮೊದಲಿನಂತೆ ಗಂಭೀರವಾಗಿ ಪರಿಗಣಿಸುವುದಿಲ್ಲವೆಂದು ಬೇಸರಿಸಿದರು.
ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಪತ್ರಿಕಾವೃತ್ತಿ ಸರಿದಾರಿಯಲ್ಲಿದೆಯೇ ಎಂದು ಅವಲೋಕಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳನ್ನು ನಮ್ಮನ್ನು ಆಳುತ್ತಿವೆ. ಸಣ್ಣ ಸುದ್ದಿ ಜಗಜ್ಜಾಹಿರಾಗುತ್ತಿದೆ. ಸುದ್ದಿಗಳ ಸರಕಿನ ನಡುವೆ ವೃತ್ತಿಪರತೆ ಕಾಪಾಡಬೇಕು ಎಂದರು.
ಕ್ಲಬ್ ಅಧ್ಯಕ್ಷ ದೇವು ನಾಗನೂರ ಮಾತನಾಡಿ, ಸದಸ್ಯರ ಹಿತರಕ್ಷಣೆಗಾಗಿ ಕ್ಲಬ್ ಕೆಲಸ ಮಾಡುತ್ತಿದೆ. ಆರೋಗ್ಯ ತಪಾಸಣೆ, ಕ್ರೀಡಾಕೂಟ, ವಿಮೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಿದ್ದೇವೆ. ಸಮಾಜಮುಖಿ ಪತ್ರಿಕೋದ್ಯಮ ಮಾಡುತ್ತಿದ್ದೇವೆಂದರು.
ರೇವಣಕಿ ಅನ್ವಿತಾ ಅನ್ವಿತಾ ಮಹಿಳೆಯರ ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಾಯೋಜಿತ ಮೀಡಿಯಾ ಕ್ಲಬ್ ವಾರ್ಷಿಕ ಪ್ರಶಸ್ತಿ-2026ನ್ನು ಪತ್ರಕರ್ತ ಆನಂದ ಬೈದನಮನೆಗೆ ಪ್ರದಾನ ಮಾಡಲಾಯಿತು. ಹಿರಿಯ ಪತ್ರಕರ್ತ ಶರಣಬಸವ ಹುಲಿಹೈದರ, ವಿವಿಧ ಸಾಧನೆ ಮೆರೆದ ಪತ್ರಕರ್ತರಾದ ಪ್ರಕಾಶ ಕಂದಕೂರ, ನಾಭಿರಾಜ ದಸ್ತೇನವರ, ಭರತ್ ಕಂದಕೂರ ಹಾಗೂ ಪತ್ರಿಕಾ ವಿತರಕ ನಾಗರಾಜ ಕಲಾಲ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತ ಪ್ರತಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.