ನಿಲೋಗಿಪುರ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ವಿರೋಧಿ ಹಾಗೂ ರಾಷ್ಟ್ರೀಯ ಕ್ಯಾನ್ಸರ್ ದಿನ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಗುರುರಾಜ ಪಾಟೀಲ ಮಾತನಾಡಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹಳ್ಳಿ, ಆರೋಗ್ಯ ಇಲಾಖೆಯ ಪ್ರತಿಭಾ, ರೇಷ್ಮಾ, ಶೋಭಾ, ರೇಣುಕಾ, ಲಕ್ಷ್ಮೀಬಾಯಿ, ಶಿಕ್ಷಕರಾದ ಸಂಗಪ್ಪ ರಾಟಿ, ಮುತ್ತು ಬನ್ನಿಕೊಪ್ಪ, ಮಂಜುನಾಥ ತಗಡಿನಮನಿ ಇತರರಿದ್ದರು.
ಅಳವಂಡಿ: ಕುಷ್ಠರೋಗವು ಸಂಪೂರ್ಣ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹಳ್ಳಿ ಹೇಳಿದರು.
ಸಮೀಪದ ನಿಲೋಗಿಪುರ ಸಹಿಪ್ರಾ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕುಷ್ಠರೋಗ ವಿರೋಧಿ ದಿನ ಹಾಗೂ ರಾಷ್ಟ್ರೀಯ ಕ್ಯಾನ್ಸರ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಷ್ಠಕ್ಕೆ ಚಿಕಿತ್ಸೆ ಹಾಗೂ ಔಷಧ ಸಂಪೂರ್ಣ ಉಚಿತ ನೀಡಲಾಗುವುದು. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಅಂಗವೈಕಲ್ಯ ಉಂಟಾಗುವುದಿಲ್ಲ ಎಂದರು.
ಕ್ಯಾನ್ಸರ್ ಅಸಾಂಕ್ರಾಮಿಕ ಕಾಯಿಲೆ. ಇದು ಹೆಚ್ಚಾಗಿ ಗಂಟಲು ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕ್ಯಾನ್ಸರ್ ಆಗಿರುತ್ತದೆ. ಇದು ವ್ಯಕ್ತಿಯ ದಿನಚರಿ, ಹವ್ಯಾಸಗಳಿಂದ ಬರುತ್ತದೆ. ತಂಬಾಕು ಉತ್ಪನ್ನಗಳು, ಮದ್ಯಪಾನ, ಧೂಮಪಾನ ಸೇವನೆ, ಸ್ವಚ್ಛತೆ ಕೊರತೆಯಿಂದ ಬರುತ್ತದೆ.
ಆದ್ದರಿಂದ ಕಾಲಕಾಲಕ್ಕೆ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಬೇಕು. ಕೊನೇ ಹಂತದಲ್ಲಿ ಪತ್ತೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸಾಯಬಹುದು. ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.