

ಪ್ರಮುಖ ಮುಖ್ಯಾಂಶಗಳು
ಕೊಪ್ಪಳ: ಬರಪೀಡಿತ ತಾಲೂಕು ಎಂದು ಘೋಷಣೆಯಾದರೆ ಮಾತ್ರ ತಾಂತ್ರಿಕವಾಗಿ ಅನುದಾನ ಬಿಡುಗಡೆ ಸಾಧ್ಯ. ಆದ್ದರಿಂದ ಕೊಪ್ಪಳದ ಶಾಸಕರು, ಸಂಸದರು ಮತ್ತು ಜಿಲ್ಲೆಯ ಇಬ್ಬರು ಮಂತ್ರಿಗಳು ಈ ಕೂಡಲೇ ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಒತ್ತಾಯಿಸಿದ್ದಾರೆ.
ಹಂತ ಹಂತವಾಗಿ ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗುವುದು ಎಂದು ಸರಕಾರ ತಿಳಿಸಿದೆ. ಈ ಘೋಷಣೆ ಮಾಡಲು ನಾಲ್ಕು ತಿಂಗಳ ಕಾಲಾವಧಿಯ ಅಗತ್ಯವಿತ್ತೆ? ತಾಲೂಕಿನಾದ್ಯಂತ ಬರದಿಂದ ಅಪಾರ ಹಾನಿಯಾಗಿದೆ. ಅಧಿಕಾರಿಳು ವಾಸ್ತವ ಅಂಕಿ ಅಂಶಗಳನ್ನು ಒದಗಿಸಲಿಲ್ಲವೋ? ಅಥವಾ ಇಲ್ಲಿನ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಲಿಲ್ಲವೋ? ಯಾವ ಕಾರಣಕ್ಕಾಗಿ ಕೊಪ್ಪಳವನ್ನು ಬರ ಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎಂಬುದನ್ನು ಇವರು ಸ್ಪಷ್ಟಪಡಿಸಬೇಕು.
ಇವರು ಬರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇಲ್ಲಿಯ ತನಕ ಯಾವ ಕ್ರಮಗಳನ್ನು ಕೈಗೊಂಡಿಲ್ಲ. ಇವರ ಅದಕ್ಷತೆಯಿಂದ ತಾಲೂಕಿಗೆ ಭಾರಿ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ನಮ್ಮ ಪಕ್ಷ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.