230 ಮನೆಗಳ ತೆರವಿಗೆ ತೂಗುಕತ್ತಿ

ಗಂಗಾವತಿ ಶ್ರೀರಾಮಲಿಂಗೇಶ ಕೆರೆಯ ನೋಟ.
ಗಂಗಾವತಿ ಶ್ರೀರಾಮಲಿಂಗೇಶ ಕೆರೆಯ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ರಾಮಲಿಂಗೇಶ ಕೆರೆ ಸಂರಕ್ಷಣೆಗೆ ಕಂದಾಯ ಇಲಾಖೆ ನಿರ್ಧಾರ
  • ಒತ್ತುವರಿದಾರಿಗೆ ನೋಟಿಸ್ ಜಾರಿ
ಗಂಗಾವತಿ: ಕೆರೆ ಒತ್ತುವರಿ ಹಿನ್ನೆಲೆಯಲ್ಲಿ ನಗರದ ವಿರುಪಾಪುರ ತಾಂಡಾ ವ್ಯಾಪ್ತಿಯ ಮನೆ ಮತ್ತು ಸಾಗುವಳಿ ಭೂಮಿ ತೆರವಿಗೆ ಕಂದಾಯ ಇಲಾಖೆಯಿಂದ ಮಾಲೀಕರಿಗೆ ನೋಟಿಸ್ ಜಾರಿಯಾಗಿದ್ದು, ತೆರವಿನ ತೂಗುಕತ್ತಿ ನೇತಾಡುತ್ತಿದೆ.
ವಿರುಪಾಪುರ ತಾಂಡಾಕ್ಕೆ ಹೊಂದಿಕೊಂಡು ಪುರಾತನ ಕಾಲದಿಂದಲೂ ರಾಮಲಿಂಗೇಶನ ಕೆರೆಯಿದ್ದು, ಸ.ನಂ. 55ರಲ್ಲಿ 33.06 ಎಕರೆ ವಿಸ್ತೀರ್ಣವಿತ್ತು. ಕಂದಾಯ ದಾಖಲೆಯಲ್ಲಿ ಕೆರೆ ಜಾಗ ಎಂದು ನಮೂದಾಗಿದ್ದರೂ, ಕಳೆದ 40ವರ್ಷಗಳಿಂದಲೂ ಒತ್ತುವರಿಯಾಗಿದೆ. ಕೆರೆಗೆ ಸಂಬಂಧಿಸಿದ ತಡೆಗೋಡೆ ಮತ್ತು ತೂಬು (ನಿಯಂತ್ರಣ ಘಟಕ) 2008ರವರೆಗೂ ಇದ್ದಿರುವ ಬಗ್ಗೆ ದಾಖಲೆಗಳಲ್ಲಿದೆ. ಉದ್ದೇಶಿತ ಜಾಗ ಬಹುತೇಕ ಒತ್ತುವರಿಯಾಗಿದ್ದು, ನೀರು ಸಂಗ್ರಹ ಪ್ರದೇಶ ಸಾಗುವಳಿ ಭೂಮಿಯಾಗಿ ಪರಿವರ್ತನೆಯಾಗಿದೆ. ಕಚ್ಚಾ, ಪಕ್ಕಾ, ಶೆಡ್ ಮತ್ತು ಗುಡಿಸಲು ಸೇರಿ 230 ಮನೆಗಳು ಕೆರೆ ಭೂಮಿ ಒತ್ತುವರಿ ಮಾಡಿಕೊಂಡಿವೆ ಎಂದು ನಗರಸಭೆ ವರದಿ ಸಲ್ಲಿಸಿದ್ದು, ಇದರನ್ವಯ ಕಂದಾಯ ಇಲಾಖೆ ಮನೆ ಮಾಲೀಕರಿಗೆ ಜೂ.18ರಂದು ನೋಟಿಸ್ ಜಾರಿ ಮಾಡಿದೆ. ಕೆರೆಗಳ ಸಂರಕ್ಷಣೆ ಮತ್ತು ಹೈಕೋರ್ಟ್ ಪೀಠದ ರಿಟ್ ಪಿಟಿಷನ್ ಉಲ್ಲೇಖಿಸಲಾಗಿದೆ.

ಹತ್ತು ದಿನಗಳ ಗಡುವು

ಉದ್ದೇಶಿತ ಕೆರೆ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹವಿದ್ದು, 2006ರಲ್ಲಿ ಪ್ರಕೃತಿ ವಿಕೋಪವಾದಾಗ ವಸತಿ ಗೃಹದ ಎರಡನೇ ಮಹಡಿಯವರೆಗೂ ನೀರು ನುಗ್ಗಿತ್ತು. ನೀರು ನಿಯಂತ್ರಣಕ್ಕೆ ಕೆರೆ ತಡೆಗೋಡೆ ತೆರವುಗೊಳಿಸಲಾಗಿತ್ತು. ಸಾಗುವಳಿ ಭೂಮಿ ಮತ್ತು ವಸತಿ ಗೃಹಕ್ಕೆ ನೀಡದ ನೋಟಿಸ್, ಬಡ ಜನರಿಗೆ ನೀಡಿದ್ಯಾಕೆ ಎಂದು ನಿವಾಸಿಗಳು ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ದಶಕಗಳಿಂದ ವಾಸವಾಗಿದ್ದು, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದಿದ್ದೇವೆ. ನಗರಸಭೆಯಿಂದ ಅಧಿಕೃತ ಹಕ್ಕುಪತ್ರ, ನೋಂದಣಿ ಪತ್ರಗಳಿವೆ. ತೆರವಿಗೆ ಏಕಾಏಕಿ ನೋಟಿಸ್ ನೀಡಿದರಲ್ಲದೇ, 10 ದಿನಗಳ ಗಡುವು ನೀಡಿರುವುದು ಸರಿಯಲ್ಲ ಎಂದು ಹೆಸರೇಳಲಿಚ್ಛಿಸದ ಮಾಲೀಕರೊಬ್ಬರು ತಿಳಿಸಿದ್ದಾರೆ.

ಎಲ್ಲ ಸೌಲಭ್ಯವೂ ಲಭ್ಯ

ತೆರವು ವ್ಯಾಪ್ತಿಯ ಪ್ರದೇಶದಲ್ಲಿ ಸ.ಕಿ.ಪ್ರಾ. ಶಾಲೆ, ಶುದ್ಧ ಕುಡಿವ ನೀರಿನ ಮೇಲೆತ್ತರದ ಟ್ಯಾಂಕ್, ಸಾರ್ವಜನಿಕ ಶೌಚಗೃಹ, ಅಂಗನವಾಡಿ ಕೇಂದ್ರ, ಸಮುದಾಯ ಭವನವಿದ್ದು, ರಾಜ್ಯ ಮತ್ತು ಕೇಂದ್ರ ಪುರಸ್ಕೃತ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕುಡಿವ ನೀರಿನ ಪೈಪ್‌ಲೈನ್, ಸೋಲಾರ್ ಲೈಟ್, ವಿದ್ಯುತ್ ಕಂಬ ಅಳವಡಿಕೆ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕಾಗಿ ವಿವಿಧ ಯೋಜನೆ ಅನುದಾನ ಬಳಸಿಕೊಳ್ಳಲಾಗಿದೆ. ತೆರವು ನೋಟಿಸ್ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಬಳಸಿಕೊಂಡ ಕೋಟ್ಯಂತರ ರೂ. ಅನುದಾನದ ಕಾಮಗಾರಿಗಳನ್ನು ತೆರವುಗೊಳಿಸಬೇಕಾದ ಸ್ಥಿತಿ ಬಂದಿದೆ. ಇದಕ್ಕೆಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರಪೇಕ್ಷಣಾ ಪತ್ರ ಕಾರಣವಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಣೆಯನ್ನಾಗಿ ಮಾಡುವಂತೆ ಮಾಲೀಕರು ತಿಳಿಸಿದ್ದಾರೆ.

ತಡೆಯಾಜ್ಞೆಗೆ ಡಿಮಾಂಡ್

ಮನೆ, ಆಸ್ತಿ ಉಳಿಸಿಕೊಳ್ಳಲು ಮಾಲೀಕರು ಕೋರ್ಟ್ ಮೊರೆ ಹೋಗಬೇಕಾಗಿದ್ದರಿಂದ ವಕೀಲರಿಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ತೆರವಿನ ನೋಟಿಸ್ ಮೇಲೆ ತಡೆಯಾಜ್ಞೆ ಕೊಡಿಸುವುದಕ್ಕಾಗಿ ವಕೀಲರ ಗುಂಪೊಂದು ಮಾಲೀಕರ ದುಂಬಾಲು ಬಿದ್ದಿದೆ. ನೋಟಿಸ್ ಬಂದಿರುವ ಬಗ್ಗೆ ಬಹಿರಂಗ ಪಡಿಸದಂತೆ ಮಾಲೀಕರಿಗೆ ಸೂಚನೆ ನೀಡಿದ್ದರಿಂದ ನೋಟಿಸ್ ಪಡೆದಿರುವವರು ಬಹಿರಂಗ ಹೇಳಿಕೆ ನೀಡಲು ಹೆದರುತ್ತಿದ್ದಾರೆ. ಕೆರೆ ಕುರುಹಗಳು ಇಲ್ಲದಿದ್ದರೂ, ಕಂದಾಯ ದಾಖಲೆಗಳ ಆಧಾರದಡಿ ನೋಟಿಸ್ ನೀಡಿದ್ದರಿಂದ ತಡೆಯಾಜ್ಞೆ ದೊರೆಯುವ ವಿಶ್ವಾಸದಲ್ಲಿ ಮಾಲೀಕರಿದ್ದಾರೆ. ಸಾಗುವಳಿದಾರರನ್ನು ಮತ್ತು ಪೊಲೀಸ್ ವಸತಿ ಗೃಹಗಳನ್ನು ಕೈಬಿಟ್ಟಿರುವ ಕಂದಾಯ ಇಲಾಖೆ ನಡೆಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
"

ಕೆರೆಗಳ ಸಂರಕ್ಷಣೆ ಕಾಯ್ದೆಯಡಿ ಮತ್ತು 2026ರ ಮೇ 15 ರಂದು ಡಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ದೇಶಿಸಿದಂತೆ ಕೆರೆ ಒತ್ತುವರಿ ಮಾಡಿ, ಮನೆ ನಿರ್ಮಿಸಿಕೊಂಡ ಮಾಲೀಕರಿಗೆ ತೆರವಿಗೆ ಜೂ.18ರಂದು ನೋಟಿಸ್ ಜಾರಿ ಮಾಡಿದ್ದು, 10 ದಿನ ಗಡುವು ನೀಡಲಾಗಿದೆ.

— ಯು.ವಸಂತಕುಮಾರಿ ತಹಸೀಲ್ದಾರ್, ಗಂಗಾವತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net