ಸಿದ್ದಾಪುರ: ಮಹಿಳೆಯರ ಶಿಕ್ಷಣದ ಬಗ್ಗೆ ಮೊದಲು ಧ್ವನಿ ಎತ್ತಿದ ಮಹಾತಾಯಿ ಸಾವಿತ್ರಿ ಬಾಯಿ ಫುಲೆ ಎಂದು ಮುಖ್ಯಶಿಕ್ಷಕ ಚಂದ್ರಶೇಖರ್ ಗಣವಾರಿ ಹೇಳಿದರು.
ಗ್ರಾಮದ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರಿಗೆ ಶಿಕ್ಷಣ ಮರೀಚಿಕೆಯಾದ ಕಾಲದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಫುಲೆ ಅವರು ಜಾಗೃತಿ ಮೂಡಿಸಿದರು.
ಅನೇಕ ಸಮಸ್ಯೆಗಳಿಗೆ ಶಿಕ್ಷಣವೇ ಅಸ್ತ್ರ ಎನ್ನುವುದನ್ನು ತಿಳಿಸಿಕೊಟ್ಟರು. ಎಲ್ಲರೂ ಶಿಕ್ಷಿತರಾಗಬೇಕು ಎನ್ನುವ ನಿಟ್ಟಿನಲ್ಲಿ ಸಮಾಜದ ಬದಲಾವಣೆಗೆ ನಾಂದಿ ಹಾಡಿದ ದಿಟ್ಟ ಹೋರಾಟಗಾರ್ತಿಯಾದರು. ಪುರುಷ ಪ್ರಧಾನ ಸಮಾಜದಲ್ಲಿ ಇಂದು ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರೆ ಅವರಿಗೆಲ್ಲ ಸ್ಫೂರ್ತಿ ಫುಲೆ ಎಂದರು. ಶಾಲೆಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.