ಬದುಕು "ಕಪ್ಪಾ'ಗಿಸುತಿಹ ಕೈಗಾರಿಕೆಗಳು

ಬದುಕು "ಕಪ್ಪಾ'ಗಿಸುತಿಹ ಕೈಗಾರಿಕೆಗಳು
ಬದುಕು "ಕಪ್ಪಾ'ಗಿಸುತಿಹ ಕೈಗಾರಿಕೆಗಳು
Published on

ಪ್ರಮುಖ ಮುಖ್ಯಾಂಶಗಳು

  • ರೋಗಗ್ರಸ್ಥವಾಗುತ್ತಿವೆ ಗ್ರಾಮಗಳು
  • 6 ಹಳ್ಳಿಗಳಲ್ಲಿ ಶೇ.16ರಷ್ಟು ರೋಗ ಪೀಡಿತರು
  • ಗವಿಶ್ರೀಗಳ ಮಾತಿಗೆ ಕಿವಿಗೊಡದ ಸರ್ಕಾರ
ಕೊಪ್ಪಳ : ಕೈಗಾರಿಕೆಗಳಿಂದ ಕೊಪ್ಪಳ ತಾಲೂಕಿನ ಆರು ಗ್ರಾಮಗಳ ಜನ ಜೀವನ ನರಕ ಸದೃಶ್ಯವಾಗಿದ್ದು, ಆರೋಗ್ಯ ಇಲಾಖೆ ನಡೆಸಿದ ಸಾಮಾನ್ಯ ಪರೀಕ್ಷೆಯಲ್ಲೇ ಶೇ.16ರಷ್ಟು ಜನರು ಕ್ಯಾನ್ಸರ್​, ಹೃದಯ ಸಂಬಂಧಿ, ಸ್ಟ್ರೊಕ್​ ಇನ್ನಿತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಆಘಾತಕಾರಿ ಅಂಶ ಹೊರಬಿದ್ದಿದೆ. ಜೀವ ಉಳಿಸಿಕೊಳ್ಳಲು ಜನರು ನಿತ್ಯ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ. ತಜ್ಞ ವೈದ್ಯರು ಅಥವಾ ಸಂಶೋಧನಾ ಸಂಸ್ಥೆ ಮೂಲಕ ಉನ್ನತ ಮಟ್ಟದ ಸ್ಕ್ರೀನಿಂಗ್​ಗೆ ಒಳಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.
ತುಂಗಭದ್ರಾ ನದಿ ಪಾತ್ರಕ್ಕೆ ಹೊಂದಿಕೊಂಡು ಒಂದೇ ಕಡೆಗೆ 17ಕ್ಕೂ ಹೆಚ್ಚು ಬೃಹತ್​ ಐರನ್​ ಆ್ಯಂಡ್​ ಸ್ಪಾಂಜ್​ ಕಾರ್ಖಾನೆಗಳಿವೆ. ಬಿಎಸ್​ಪಿಎಲ್​ ಮತ್ತೊಂದು ಬೃಹತ್​ ಕೈಗಾರಿಕೆ ನಿಮಾರ್ಣಕ್ಕೆ ಮುಂದಾಗಿದ್ದು ಜಿಲ್ಲಾ ಕೇಂದ್ರ ಕೊಪ್ಪಳ ಸೇರಿ 20ಕ್ಕೂ ಹೆಚ್ಚು ಗ್ರಾಮಗಳ ಜನತೆಗೆ ಮರಣ ಶಾಸನ ಬರೆಯಲು ಸರ್ಕಾರ ಮುಂದಾಗಿದೆ.
ಗವಿಶ್ರೀಗಳು ಕೈಗಾರಿಕೆ ವಿಸ್ತರಣೆ ತಡೆ, ಬಿಎಸ್ಪಿಎಲ್​ ಪರವಾನಗಿ ರದ್ದುಗೊಳಿಸುವಂತೆ ಮಾಡಿದ ಮನವಿಗೆ ಎರಡು ವರ್ಷವಾಗಿದೆ. ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡ ಅರ್ನಿದಿಷ್ಟ ಧರಣಿ ಆರು ತಿಂಗಳು ಪೂರೈಸಿದೆ. ನಾಡಿನ ಚಿಂತಕರು, ಬುದ್ಧಿ ಜೀವಿಗಳು, ಪರಿಸರ ಪ್ರೇಮಿಗಳು, ರೈತ ನಾಯಕರು ಹೋರಾಟ ಬೆಂಬಲಿಸಿ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಿದ್ದಾರೆ. ಸರ್ಕಾರ ಕಿವಿಗೊಡದೆ ತಟಸ್ಥವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​) ಮೂಲಕ ಸಂಶೋಧನೆ ನಡೆಸುವುದಾಗಿ ನೀಡಿದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಸಮೀಕ್ಷೆ ಬಗ್ಗೆ ಜಿಲ್ಲಾಡಳಿತ, ಹೋರಾಟಗಾರರು, ಈ ಭಾಗದ ಜನರಿಗೆ ಮಾಹಿತಿಯೂ ಇಲ್ಲ.

ಆರು ಗ್ರಾಮಗಳಲ್ಲಿ ಸ್ಕ್ರೀನಿಂಗ್​

ಕಾರ್ಖಾನೆಗಳ ವಿಷ ತ್ಯಾಜ್ಯಕ್ಕೆ 20ಕ್ಕೂ ಹೆಚ್ಚು ಗ್ರಾಮಗಳು ನಲುಗುತ್ತಿವೆ. ಕೈಗಾರಿಕೆಗಳ ದೀಪದ ಕೆಳಗಿನ ಕತ್ತಲಲ್ಲಿ ಇರುವ ಆರು ಗ್ರಾಮಗಳ ಜನರ ಜೀವನ ನರಕ ಸದೃಶ್ಯವಾಗಿದೆ. ಹಿರೇಬಗನಾಳ, ಚಿಕ್ಕ ಬಗನಾಳ, ಕುಣಿಕೇರಿ, ಅಲ್ಲಾನಗರ, ಲಾಚನಕೇರಿ ಹಾಗೂ ಕರ್ಕಿಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಶಿಶಿಕ್ಷು ವೈದ್ಯಾಧಿಕಾರಿಗಳು, ಇತರ ಸಾಮಾನ್ಯ ಸಿಬ್ಬಂದಿ ಬಳಸಿ ಪ್ರಾಥಮಿಕ ಆರೋಗ್ಯ ಪರೀಕ್ಷೆ ನಡೆಸಿದೆ. ಒಟ್ಟು ಗ್ರಾಮಸ್ಥರ ಪೈಕಿ ಕೆಲವರಷ್ಟೇ ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಕೆಲವರು ಪ್ರತಿಷ್ಠೆ, ನಾನಾ ಕಾರಣಕ್ಕೆ ಪರೀಕ್ಷೆಗೆ ಒಳಗಾಗಿಲ್ಲ.

ಉನ್ನತ ತಪಾಸಣೆಗೆ ಶಿಫಾರಸ್ಸು

ಜಿಲ್ಲಾಡಳಿತ ಲಭ್ಯ ವೈದ್ಯಾಧಿಕಾರಿಗಳ ಮೂಲಕ ಸಾಮಾನ್ಯ ಪರೀಕ್ಷೆ ನಡೆಸಿದ್ದು ಎಲ್ಲರನ್ನೂ ವೈಜ್ಞಾನಿಕ ತಪಾಸಣೆಗೆ ಒಳಪಡಿಸಿಲ್ಲ. ವೈದ್ಯಕಿಯ ಮಹಾವಿದ್ಯಾಲಯ, ಸಂಶೋಧನಾ ಸಂಸ್ಥೆ, ತಜ್ಞ ವೈದ್ಯರು, ಪಿಜಿಷಿಯನ್​ಗಳು, ಕಿವಿ-&ಮೂಗು-&ಗಂಟಲು ತಜ್ಞರು, ನೇತ್ರ, ಚರ್ಮರೋಗ, ಸಮುದಾಯ ವೈದ್ಯಶಾಸ್ತ್ರ ತಜ್ಞರಿಂದ ಕೂಲಂಕಷ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿದೆ.

ಮಕ್ಕಳಿಗೂ ಸ್ಟ್ರೊಕ್​

ಆರು ಗ್ರಾಮಗಳಲ್ಲಿ 12,755 ಜನ ವಾಸವಿದ್ದು, ಒಂದು ಸಾವಿರ ಮಕ್ಕಳಿದ್ದಾರೆ. 1,963 ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 8 ಜನ ಕ್ಯಾನ್ಸರ್​, 230 ಉಸಿರಾಟ ಸಮಸ್ಯೆ, 46 ಬಂಜೆತನ, 28 ಹೃದಯ ಸಂಬಂಧಿ, 32 ಸ್ಟ್ರೊಕ್​, 250 ದೃಷ್ಟಿದೋಷ, 151 ಚರ್ಮ ಕಾಯಿಲೆ, 110 ಟಿಬಿ, 173 ಕೀಲು ನೋವು, 502 ಬಿಪಿ, 298 ಮಧುಮೇಹ, 133 ಬಿಪಿ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲಿದರೆ ಇಬ್ಬರು ಮಕ್ಕಳು ತೀವ್ರ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಮೂರು ವರ್ಷದ ಓರ್ವ ಮಗುವಿಗೂ ಸ್ಟ್ರೊಕ್​ ಆಗಿದೆ. ಯುವಕರು ಸೇರಿ ಹಲವರು ಈಗಾಗಲೇ ಕ್ಯಾನ್ಸರ್​ನಿಂದ ಜೀವ ಬಿಟ್ಟಿದ್ದಾರೆ.
"

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಾರ್ಖಾನೆ ಭಾದಿತ ಆರು ಗ್ರಾಮಗಳ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಹಲವರಲ್ಲಿ ರೋಗಗಳು ಪತ್ತೆಯಾಗಿವೆ. ಈ ಬಗ್ಗೆ ತಜ್ಞ ವೈದ್ಯರು, ಉನ್ನತಮಟ್ಟದ ಸಂಸ್ಥೆ ಮೂಲಕ ಸ್ರೀನಿಂಗ್​ ಮಾಡಿಸುವಂತೆ ಶಿಾರಸ್ಸು ಮಾಡಿ ವರದಿ ಸಲ್ಲಿಸಿದ್ದೇವೆ.

— ಡಾ.ಟಿ.ಲಿಂಗರಾಜು. ಡಿಎಚ್​ಒ ಕೊಪ್ಪಳ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net