ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮವನ್ನು ಮದ್ಯಮುಕ್ತವಾಗಿ ಮಾಡಬೇಕೆಂದು ಕರವೇ ನೇತೃತ್ವದಲ್ಲಿ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದರು. ತಾಪಂ ಇಒ ನೀಲಗಂಗಾ ಬಬಲಾದ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್‌ಐ ವಿಜಯ ಪ್ರತಾಪ, ಅಬಕಾರಿ ಇಲಾಖೆ ಸಿಪಿಐ ರವಿಕುಮಾರ, ಪಿಎಸ್‌ಐ ನೀಲಾ, ಪಿಡಿಒ ರವಿಕುಮಾರ ಲಿಂಗಣ್ಣವರ ಇತರರಿದ್ದರು.
ಯಲಬುರ್ಗಾ: ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಎತೇಚ್ಚವಾಗಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ತಡೆದು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಕರವೇ (ಎಚ್.ಶಿವರಾಮೇಗೌಡ ಬಣ) ನೇತೃತ್ವದಲ್ಲಿ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ, ತುಮ್ಮರಗುದ್ದಿಯಲ್ಲಿ ಹಲವಾರು ವರ್ಷಗಳಿಂದ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಯುವಕರು, ಹಿರಿಯರು ಮದ್ಯ ಸೇವಿಸಿ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೌಟುಂಬಿಕ ಕಲಹ ಹೆಚ್ಚಾಗಿದ್ದು, ಕುಟುಂಬಗಳು ಬೀದಿಗೆ ಬಂದಿವೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ ಎರಡ್ಮೂರು ದಿನಗಳು ಮಾತ್ರ ಮದ್ಯ ಅಕ್ರಮ ಮಾರಾಟ ನಿಲ್ಲಿಸಲಾಗುತ್ತದೆ. ಪುನಃ ಎಂದಿನಂತೆ ನಡೆಯುತ್ತದೆ. ಇದರ ಹಿಂದೆ ಮೇಲಧಿಕಾರಿಗಳ ಕೈವಾಡ ಇರಬಹುದೆಂಬ ಅನುಮಾನವಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮುಂದೆ ಅಗುವ ಎಲ್ಲ ಘಟನೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ್ ಮಾತನಾಡಿ, ಸಮಾಜವನ್ನು ಮದ್ಯ ಕೆಟ್ಟ ದಾರಿಗೆ ಕೊಂಡೊಯ್ಯುತ್ತಿದೆ. ಹಳ್ಳಿಗಳಲ್ಲಿ ಸಣ್ಣ ಮಕ್ಕಳೂ ಸಹ ಮದ್ಯದ ದಾಸರಾಗುತ್ತಿದ್ದಾರೆ. ಇದೇ ಪದ್ಧತಿ ಮುಂದುವರಿದರೆ ಮುಂದೊಂದು ದಿನ ಯುವಪೀಳಿಗೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮದ್ಯ ಮಾರಾಟ ವಿರೋಧಿಸಿ ತಾಯಂದಿರು, ಸಾರ್ವಜನಿಕರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಕೂಡಲೇ ಮದ್ಯ ಅಕ್ರಮ ಮಾರಾಟ ನಿಲ್ಲಬೇಕು. ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮದ್ಯ ಸೇವನೆಯಿಂದ ಮೃತರಾದ ಕುಟುಂಬಕ್ಕೆ ಪರಿಹಾರ ನೀಡಬೇಕು. ಗ್ರಾಪಂ ಕಚೇರಿಯಿಂದ ಜಾಗೃತಿ ಮೂಡಿಸಬೇಕು ಎಂದರು.